ಟೊಯೋಟಾ ಕಿರ್ಲೋಸ್ಕರ್ ಸಮಸ್ಯೆ ಪರಿಹಾರಕ್ಕೆ ಮುಂದುವರಿದ ಪ್ರಯತ್ನ: ಕಾರ್ಮಿಕ ಇಲಾಖೆ

Update: 2020-12-22 18:10 GMT

ಬೆಂಗಳೂರು, ಡಿ.22: ರಾಮನಗರದ ಬಿಡದಿಯಲ್ಲಿ ಇರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಲಿಮಿಟೆಡ್‍ನಲ್ಲಿ ಕಾರ್ಮಿಕ ಮತ್ತು ಆಡಳಿತ ಮಂಡಳಿ ನಡುವೆ ಉದ್ಭವಿಸಿರುವ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಆದೇಶದಂತೆ ಕಾರ್ಮಿಕ ಇಲಾಖೆ ಹತ್ತು ಹಲವು ಪ್ರಯತ್ನಗಳನ್ನು ಮುಂದುವರಿಸಿದೆ.

ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿ ಕಾರ್ಖಾನೆಯು ಕಾರ್ಯಾರಂಭಗೊಳಿಸುವ ವಾತಾವರಣ ಸೃಷ್ಟಿಸುವ ಮೂಲಕ ಕಾರ್ಮಿಕ ಮತ್ತು ಮಾಲಕರ ಸಂಬಂಧ ಗಟ್ಟಿಗೊಳಿಸುವ ಹಲವು ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ.

ಕಳೆದ ನ.9ರಂದು ಕಾರ್ಮಿಕರ ಸಂಘಟನೆ ಪದಾಧಿಕಾರಿಗಳನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದ್ದರಿಂದ ದಿಢೀರ್ ಮುಷ್ಕರ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಆಡಳಿತ ಮಂಡಳಿಯು ನ.10ರಂದು ಲಾಕ್‍ಔಟ್ ಘೋಷಿಸುವ ಮೂಲಕ ಸಂಸ್ಥೆಯ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿತ್ತು. ಈ ಬೆಳವಣಿಗೆಯ ತೀವ್ರತೆಯನ್ನು ಅರಿತಿದ್ದ ಕಾರ್ಮಿಕ ಇಲಾಖೆ ಕೂಡಲೇ ಸಮಸ್ಯೆ ನಿವಾರಣೆಗೆ ಮುಂದಾಯಿತಲ್ಲದೆ, ಇಲಾಖೆ ಸಂಧಾನಕಾರಿಗಳು ಮತ್ತು ಕೈಗಾರಿಕಾ ಬಾಂಧವ್ಯ ವಿಭಾಗದ ಆಯುಕ್ತರು ಕಾರ್ಮಿಕರೊಂದಿಗೆ ಸಂಧಾನ ಸಭೆ ನಡೆಸಿದರು ಮತ್ತು ಕಾರ್ಮಿಕರ ಬೇಡಿಕೆಗಳ ಬಗ್ಗೆ ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಸುವ ಜತೆಗೆ ಮುಷ್ಕರ ಮತ್ತು ಲಾಕ್‍ಔಟ್ ನಿರ್ಧಾರಗಳನ್ನು ನಿಷೇಧಿಸುವಂತೆ ವರದಿ ಸಲ್ಲಿಸಿದರು.

ಈ ಶಿಫಾರಸ್ಸಿಗೆ ಪ್ರತಿಯಾಗಿ ಮಾತುಕತೆಗೆ ಉತ್ತಮ ವಾತಾವರಣ ಸೃಷ್ಟಿಸುವ ಸಲುವಾಗಿ ಕಾರ್ಮಿಕ ಇಲಾಖೆಯು ಲಾಕ್‍ಔಟ್ ಮತ್ತು ಮುಷ್ಕರ ಎರಡನ್ನೂ ನಿಷೇಧಿಸಿ ಆದೇಶ ಹೊರಡಿಸಿದೆ. ಇದರ ಪರಿಣಾಮ ನ.18ರಂದು ಆಡಳಿತ ಮಂಡಳಿ ಲಾಕ್‍ಔಟ್ ತೆರವುಗೊಳಿಸಿ 19ರಿಂದ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಪುನಃ ಆಡಳಿತ ಮಂಡಳಿ ಘಟಕದಲ್ಲಿ ಅಶಾಂತಿಯ ವಾತಾವರಣದ ಕಾರಣ ನೀಡಿ ಲಾಕ್‍ಔಟ್ ಘೋಷಿಸಿತು.

ಆದರೆ, ಎರಡನೇ ಬಾರಿಯ ಲಾಕ್‍ಔಟ್ ನೋಟಿಸ್‍ನಲ್ಲಿ ಟೊಯೋಟಾ ಆಡಳಿತ ಮಂಡಳಿಯು ಷರತ್ತುಬದ್ಧ ಒಪ್ಪಿಗೆ ಪತ್ರ ಸಲ್ಲಿಸುವ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ ಮಾಡಿಕೊಟ್ಟಿದೆ. ಇದರ ಪರಿಣಾಮ ಸುಮಾರು 1000 ಕಾರ್ಮಿಕರು ಕಾರ್ಖಾನೆಯಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಒಂದು ಪಾಳಿಯಲ್ಲಿ ಸುಸೂತ್ರವಾಗಿ ಕೆಲಸ ನಡೆಯುತ್ತಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಈ ನಡುವೆ, ಕಾರ್ಖಾನೆ ಆಡಳಿತ ಮಂಡಳಿಯು ಕರ್ತವ್ಯಲೋಪ ಮತ್ತು ಅಶಿಸ್ತಿನ ಕಾರಣ ನೀಡಿ 69 ಕಾರ್ಮಿಕರನ್ನು ಅಮಾನತುಗೊಳಿಸಿದ ಬೆಳವಣಿಗೆ ನಡೆದಿದ್ದು, ಈ ಬಗ್ಗೆ ಇಲಾಖಾ ವಿಚಾರಣೆ ಬಾಕಿ ಇದ್ದು, ಕಾನೂನು ಪ್ರಕಾರ ನಿಷೇಧಿತ ಲಾಕ್‍ಔಟ್ ಮತ್ತು ಮುಷ್ಕರ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಕಾರ್ಮಿಕ ಸಂಘಟನೆಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ಹೂಡಲು ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ವಿಚಾರಣೆ ನಿಗದಿಪಡಿಸಲಾಗಿದೆ.

ಡಿ.14ರಂದು ಇಲಾಖೆ ಆಯುಕ್ತರ ಸಮ್ಮುಖದಲ್ಲಿ ಮತ್ತೊಂದು ಸುತ್ತಿನ ಸಭೆ ಮತ್ತು ಮಾತುಕತೆ ನಡೆಯಿತಾದರೂ, ಕಾರ್ಮಿಕ ಸಂಘಟನೆ ಮತ್ತು ಆಡಳಿತ ಮಂಡಳಿ ನಡುವೆ ಸಹಮತ ಮೂಡದ ಪರಿಣಾಮ ಮಾತುಕತೆ ವಿಫಲಗೊಂಡಿದ್ದರೂ ಸಹ ಕಾರ್ಮಿಕ ಇಲಾಖೆ ಅಗತ್ಯ ಕಾನೂನುಗಳ ಬಳಕೆ ಮೂಲಕ ಉಭಯ ಪಕ್ಷಗಳ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಕಾರ್ಮಿಕ, ಮಾಲಕ ಸ್ನೇಹಿ ವಾತಾವರಣ ನಿರ್ಮಿಸುವತ್ತ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ಕಾರ್ಮಿಕ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News