ರಾಜ್ಯದಲ್ಲಿ ಸರಕಾರದ ಜವಾಬ್ದಾರಿ ಯಾರು ನಿಭಾಯಿಸುತ್ತಿದ್ದಾರೆ ಎನ್ನುವುದೇ ಗೊಂದಲ: ಪ್ರಿಯಾಂಕ್ ಖರ್ಗೆ

Update: 2020-12-23 11:29 GMT

ಯಾದಗಿರಿ, ಡಿ.23: ರಾಜ್ಯ ಬಿಜೆಪಿಯಲ್ಲಿ ಅಭಿವೃದ್ಧಿಗಿಂತ ಸಂಪುಟ ವಿಸ್ತರಣೆ, ಆಪರೇಷನ್ ಕಮಲ, ಗೊಂದಲದ ಹೇಳಿಕೆಗಳ ಜತೆಗೆ, ಸಿಎಂ, ಇಬ್ಬರು ಡಿಸಿಎಂಗಳಿದ್ದು ಸರಕಾರದ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಿದ್ದಾರೆ ಎನ್ನುವುದೇ ಗೊಂದಲಮಯವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬುಧವಾರ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಾತ್ರ ಅಭಿವೃದ್ದಿ ಕೆಲಸಗಳಾಗಲು ಸಾಧ್ಯ ಎಂದು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಆರ್‍ಟಿಇ, ಆಂಬುಲೆನ್ಸ್, ಆಹಾರ ಭದ್ರತೆ, ಕೃಷಿ ಸಾಲಮನ್ನಾ ಇವೆಲ್ಲ ಮಾಡಿದ್ದು ಕಾಂಗ್ರೆಸ್ ಸರಕಾರವೇ ಹೊರತು ಈಗಿನ ಬಿಜೆಪಿ ಅಲ್ಲ ಎಂದರು.

ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಈ ಭಾಗದ ಕೂಲಿ ಕಾರ್ಮಿಕರನ್ನು ವಾಪಸ್ ಕರೆತರಲು ಅವರಿಂದ ಎರಡು ಪಟ್ಟು ದುಡ್ಡು ವಸೂಲಿ ಮಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಇದ್ದರೆ ರೈತರ, ಕೂಲಿ ಕಾರ್ಮಿಕರ ಆದಾಯ ದುಪ್ಪಟ್ಟು ಮಾಡುವುದಾಗಿ ವಾಗ್ದಾನ ಮಾಡಿದ ಮೋದಿ ಅವರಿಗೆ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಸಾವಿರಾರು ರೈತರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ಹರಿಹಾಯ್ದರು.

ಸಚಿವ ಚೌಹಾಣ್‍ಗೆ ಭಾಷೆಯೇ ಬರುವುದಿಲ್ಲ

‘ಕಲ್ಯಾಣ ಕರ್ನಾಟಕದ ಭಾಗದ ಶಾಸಕರಲ್ಲಿ ಒಬ್ಬರೇ ಮಂತ್ರಿಯಾಗಿದ್ದು, ಅದು ಪ್ರಭು ಚೌಹಾಣ್. ಅವರಿಗೆ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಯಾವ ಭಾಷೆಯೂ ಸರಿಯಾಗಿ ಬರಲ್ಲ.’

-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News