ಜ.2ರವರೆಗೆ ರಾಜ್ಯಾದ್ಯಂತ 'ರಾತ್ರಿ ಕರ್ಫ್ಯೂ': ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ
ಬೆಂಗಳೂರು, ಡಿ.23: ರೂಪಾಂತರಗೊಂಡಿರುವಂತಹ ಕೊರೋನ ವೈರಾಣು ಕಂಡು ಬಂದಿರುವ ಹಿನ್ನೆಲೆಯಲ್ಲಿ ಡಿ.24ರ ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಡಿ.24ರ ರಾತ್ರಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು(ಮಿಡ್ ನೈಟ್ ಮಾಸ್) ಯಾವುದೆ ಅಡಚಣೆಯಿಲ್ಲದೆ ಮಾಡಬಹುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಡಿ.23 ರಿಂದ ಜನವರಿ 2ರವರೆಗೆ 9 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿತ್ತು. ಆದರೆ, ವಿವಿಧ ಸಮುದಾಯದ ಮುಖಂಡರು, ಎಫ್‍ಕೆಸಿಸಿಐ ಪದಾಧಿಕಾರಿಗಳು, ಹೊಟೇಲ್ ಹಾಗೂ ಬಾರ್ ಮಾಲಕರು ಸೇರಿದಂತೆ ವಿವಿಧ ವರ್ತಕರ ಸಂಘಗಳ ಮನವಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ರಾತ್ರಿ ಕರ್ಫ್ಯೂ ಅವಧಿಯನ್ನು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಲು ತೀರ್ಮಾನಿಸಿದ್ದಾರೆ.
ಹೊರದೇಶದಿಂದ ಬರುವಂತಹ ಪ್ರತಿಯೊಬ್ಬರೂ ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ತಮ್ಮ ಜೊತೆಯಲ್ಲಿಟ್ಟುಕೊಂಡೆ ಪ್ರವಾಸ ಮಾಡಬೇಕು. ಅದು ತಮ್ಮ ಪ್ರಯಾಣದ 72 ಗಂಟೆಯೊಳಗೆ ಮಾಡಿಸಿರಬೇಕು. ಈಗಾಗಲೇ ಬೆಂಗಳೂರಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೋವಿಡ್ ಪರೀಕ್ಷೆ ಇಲ್ಲದೆ ಯಾರೊಬ್ಬರೂ ವಿಮಾನ ನಿಲ್ದಾಣದಿಂದ ಹೊರಗೆ ಬರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜನರ ಆರೋಗ್ಯದ ದೃಷ್ಟಿಯಿಂದ ರಾತ್ರಿ ಕರ್ಫ್ಯೂವನ್ನು ವಿಧಿಸಲಾಗುತ್ತಿದೆ. ಆದುದರಿಂದ, ಎಲ್ಲರೂ ಸಹಕಾರ ನೀಡಬೇಕು. ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೆ ತೊಂದರೆಯಾಗುವುದಿಲ್ಲ. ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಶಾಲಾ, ಕಾಲೇಜುಗಳನ್ನು ಜ.1ರಿಂದ ತೆರೆಯುವ ಸಂಬಂಧ ಈಗಾಗಲೆ ಚರ್ಚೆ ಮಾಡಿ ನಿರ್ಧರಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ರಾತ್ರಿ ಕರ್ಫ್ಯೂ ಮಾರ್ಗಸೂಚಿಗಳು: ರಾತ್ರಿ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಯಾವುದೆ ಬಗೆಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಯಾವುದೆ ನಿರ್ಬಂಧವಿಲ್ಲ. ರಾತ್ರಿ ವೇಳೆಯಲ್ಲಿ ಕಾರ್ಯಚರಿಸುವಂತಹ ಕೈಗಾರಿಕೆಗಳು, ಕಂಪೆನಿಗಳು ಹಾಗೂ ಸಂಸ್ಥೆಗಳು ಅಗತ್ಯವಿರುವ ಸಿಬ್ಬಂದಿ ಪೈಕಿ ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು. ಸಂಸ್ಥೆಗಳಿಂದ ನೀಡಲಾಗುವ ಗುರುತಿನ ಚೀಟಿಯನ್ನು ಪ್ರದರ್ಶಿಸಿ ಸಿಬ್ಬಂದಿಗಳು ಸಂಚರಿಸಬಹುದು. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.
ರಾತ್ರಿ ವೇಳೆ ದೂರ ಸಂಚರಿಸುವ ಬಸ್ಸು, ರೈಲು ಹಾಗೂ ವಿಮಾನಯಾನ ಸೇವೆಗೆ ಅವಕಾಶವಿದೆ. ಟ್ಯಾಕ್ಸಿ, ಆಟೋಗಳಲ್ಲಿ ಪ್ರಯಾಣಿಕರನ್ನು ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಂದ ಕರೆತರಲು ಹಾಗೂ ಬಿಡಲು ಅಧಿಕೃತವಾದ ಟಿಕೆಟ್ ಪ್ರದರ್ಶಿಸಿ ಸಂಚರಿಸಲು ಅವಕಾಶವಿದೆ. ಡಿ.24ರಂದು ನಡೆಯಲಿರುವ ಮಿಡ್‍ನೈಟ್ ಕ್ರಿಸ್ಮಸ್ ಮಾಸ್(ಕ್ರಿಸ್ಮಸ್ ಹಿನ್ನೆಲೆ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ)ಗೆ ಹಾಗೂ ಹೊಸ ವರ್ಷಾಚರಣೆಗೆ ಡಿ.17ರಂದು ಹೊರಡಿಸಲಾಗಿರುವ ಮಾರ್ಗಸೂಚಿ ಪ್ರಕಾರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.