ಹಾವೇರಿ: ‘ಲವ್ ಜಿಹಾದ್’ ಹೆಸರಿನಲ್ಲಿ ಯುವಕನಿಗೆ ಹಲ್ಲೆಗೈದ ಗುಂಪು
ಹಾವೇರಿ,ಡಿ.23: ಮುಸ್ಲಿಮ್ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಹಿಂದೂ ಧರ್ಮೀಯ ಯುವತಿ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚಿದ ದುಷ್ಕರ್ಮಿಗಳ ಗುಂಪೊಂದು ಯುವಕನಿಗೆ ಹಲ್ಲೆ ನಡೆಸಿದ ಘಟನೆಯು ಹಾವೇರಿಯ ಶಿಗ್ಗಾಂವ್ ತಾಲೂಕಿನ ಬಂಕಾಪುರ ಎಂಬಲ್ಲಿ ನಡೆದಿದೆ. ಯುವಕನಿಗೆ ಥಳಿಸುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವ ವೀಡಿಯೋವೊಂದು ಸದ್ಯ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ವೀಡಿಯೋದಲ್ಲಿ “ನಿನಗೆ ಹಿಂದೂ ಮಹಿಳೆಯರೇ ಬೇಕೆ? ನಿನ್ನ ಸಹೋದರಿಯರನ್ನು ನಾವು ಅಪಹರಿಸಿದರೆ ನೀನು ಸುಮ್ಮನಿರುತ್ತೀಯಾ? ಮಸೀದಿಗೆ ಹೋಗಿ ನಿನ್ನ ಅಂಜುಮನ್ ನ ಮುಖಂಡರನ್ನು ಕರೆ. ನೀನು ಲವ್ ಜಿಹಾದ್ ಮಾಡುತ್ತಿದ್ದೀಯಾ? ನೀನವಳನ್ನು ಮದುವೆಯಾಗುತ್ತೀಯಾ? ಮುಂತಾದಂತೆ ಇನ್ನಿತರ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದು ವೀಡಿಯೋದಲ್ಲಿ ಕಂಡು ಬಂದಿದೆ.
ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸಂತೋಷ್ ಪಾಟೀಲ್, “ಯುವತಿಯು ಬಡವೂರು ನಿವಾಸಿಯಾಗಿದ್ದು, ಯುವಕನು ರಾಮಪುರ ನಿವಾಸಿಯಾಗಿದ್ದಾನೆ. ನಾವು ಇದುವರೆಗೆ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಯುವಕನ ಕಡೆಯಿಂದ ಮತ್ತು ಯುವತಿಯ ಕಡೆಯಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಲವ್ ಜಿಹಾದ್ ಕುರಿತು ನಾವೇನೂ ತನಿಖೆ ನಡೆಸಿಲ್ಲ. ಇನ್ನು ಇವರಿಬ್ಬರೂ ಪರಾರಿಯಾಗಿದ್ದು ನಿಜ. ಒಂದು ವೇಳೆ ಇಬ್ಬರು ವಯಸ್ಕರಲ್ಲದಿದ್ದರೆ ನಾವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬಹುದಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ.