ಕೋವಿಡ್ ಸಂಕಷ್ಟದ ನಡುವೆಯೇ ಕ್ರಿಸ್ಮಸ್ ಸಂಭ್ರಮಾಚರಣೆಗೆ ಸಿದ್ಧತೆ: ಹೊಸ ವರ್ಷಾಚರಣೆಗೆ ಕರ್ಫ್ಯೂ ಅಡ್ಡಿ

Update: 2020-12-23 14:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.23: ರಾಜ್ಯಾದ್ಯಂತ ಎರಡನೇ ಹಂತದ ಕೋವಿಡ್ ಸಂಕಷ್ಟದ ನಡುವೆಯೇ ಕ್ರಿಸ್ಮಸ್ ಆಚರಣೆಗೆ ಜನತೆ ಸಜ್ಜಾಗುತ್ತಿದ್ದು, ಎಲ್ಲೆಡೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಆದರೆ ಹೊಸ ವರ್ಷಾಚರಣೆಗೆ ಸರಕಾರ ವಿಧಿಸಿದ ರಾತ್ರಿ ಕರ್ಫ್ಯೂ ಅಡ್ಡಿಯಾಗಿದೆ.

ಈಗಾಗಲೇ ಸಿಲಿಕಾನ್ ಸಿಟಿಯ ಚರ್ಚ್ ಗಳು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಂಡಿದ್ದು, ಹಬ್ಬವನ್ನು ಆಚರಿಸಲು ತಯಾರಾಗಿವೆ. ಇನ್ನು, ನಕ್ಷತ್ರಗಳ ಮಿಂಚು, ಬಲೂನುಗಳ ಚಿತ್ತಾರ, ಹಚ್ಚ ಹಸಿರಿನ ಕ್ರಿಸ್ಮಸ್ ಟ್ರೀ, ವಿಭಿನ್ನ ವಿನ್ಯಾಸದ ಗೋದಲಿಗಳು, ಸಾಂತಾ ಕ್ಲಾಸ್‍ನ ಪ್ರತಿಬಿಂಬ, ಶುಭ ಸಂಕೇತದ ಗಂಟೆ ಜತೆಗೆ ಮನಸ್ಸು ಮುದಗೊಳಿಸುವ ಸಂಗೀತ ಕ್ರಿಸ್ಮಸ್‍ನ ಸಂಭ್ರಮವನ್ನು ಇಮ್ಮಡಿಗೊಳಿಸಿವೆ.

ಸರಕಾರ ಈಗಾಗಲೇ ರಾತ್ರಿ ಕರ್ಫ್ಯೂ ಮಾರ್ಗಸೂಚಿ ಪ್ರಕಟಿಸಿದ್ದು, ಹಬ್ಬದ ಸಂದರ್ಭದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮ(ಮಿಡ್‍ನೈಟ್ ಮಾಸ್)ಗಳನ್ನು ಯಾವುದೇ ಅಡೆತಡೆಯಿಲ್ಲದೇ ಮಾಡಬಹುದು ಎಂದು ತಿಳಿಸಿದೆ. ಹೀಗಾಗಿ ಅದ್ಧೂರಿ ಹಬ್ಬದ ಆಚರಣೆಗೆ ಭಾರೀ ಸಿದ್ಧತೆ ನಡೆದಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಹಬ್ಬದ ಕಳೆ ರಂಗೇರಲಿದೆ.

ಮಾರಾಟ ಜೋರು: ಬೆಂಗಳೂರು ನಗರದ ಶಿವಾಜಿನಗರ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಹಲಸೂರು, ಎಂ.ಜಿ. ರಸ್ತೆ, ಜೆ.ಪಿ. ನಗರ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ಕ್ರಿಸ್ಮಸ್‍ನ ಆಲಂಕಾರಿಕ ವಸ್ತುಗಳ ಮಾರಾಟ ವಹಿವಾಟು ಜೋರಾಗಿ ನಡೆದಿದೆ. ಕ್ರಿಸ್ಮಸ್ ಟ್ರೀ, ಸ್ಟಾರ್ ಗಳು, ಬೊಂಬೆಗಳು, ಉಡುಗೊರೆಯ ಬಾಕ್ಸ್‍ಗಳು ಹಾಗೂ ಹಲವು ಪರಿಕರಗಳ ಮಾರಾಟ ಜೋರಾಗಿ ನಡೆದಿದೆ.

ಈ ವರ್ಷ ಹೊಸದಾಗಿ ಸಾಂತಾ ಕ್ಲಾಸ್ ಗೊಂಬೆಗಳು, ರೆಂಡರ್, ಎಲ್‍ಇಡಿ ಸ್ಟಾರ್ ಗಳು, ಲೈಟಿಂಗ್ಸ್ ಗಳು ಬಂದಿವೆ. ಕ್ರಿಸ್ಮಸ್ ಟ್ರೀ ವಿನ್ಯಾಸದ ಆಧಾರದ ಮೇಲೆ 80 ರೂ.ನಿಂದ 8 ಸಾವಿರ ರೂ., ಸಾಂತಾ ಕ್ಲಾಸ್ ಡ್ರೆಸ್ 350 ರೂ.ನಿಂದ 1200 ರೂ., ಎಲ್‍ಇಡಿ ಲೈಟಿಂಗ್ಸ್ ಗಳು 150-850 ರು. ಬೆಲ್ಸ್ ಗಳು 40 ರೂ.ನಿಂದ 1400 ರೂ.ವರೆಗೆ ದರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News