ಕನ್ನಡ ವಿವಿ ಉಳಿವಿಗೆ ಆಗ್ರಹಿಸಿ ಭಿತ್ತಿಪತ್ರ ಅಭಿಯಾನ: ಸಾಹಿತಿಗಳು, ಶಿಕ್ಷಣ ತಜ್ಞರಿಂದ ಬೆಂಬಲ
ಬೆಂಗಳೂರು, ಡಿ.23: ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸುವ ಆಂದೋಲನದ ಭಾಗವಾಗಿ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿರುವ ‘ಭಿತ್ತಿಪತ್ರ ಚಳವಳಿ’ಗೆ ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಬೆಂಬಲ ನೀಡಿದ್ದಾರೆ.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಸಂಸ್ಕೃತಿ ಚಿಂತಕ ಕೆ.ವಿ.ನಾರಾಯಣ, ಬಂಜಗೆರೆ ಜಯಪ್ರಕಾಶ್, ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ನಿವೃತ್ತ ಪ್ರಾಧ್ಯಾಪಕ ಅಶೋಕ್ ಶೆಟ್ಟರ್ ಸೇರಿದಂತೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನಾ ಕ್ಷೇತ್ರದ ಗಣ್ಯರು ವ್ಯಾಪಕವಾಗಿ ಬೆಂಬಲಿಸಿದ್ದು, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.
ವಿಶ್ವಜ್ಞಾನವನ್ನು ಕನ್ನಡದಲ್ಲಿ ತಂದು ಸ್ಥಳೀಯ ಮತ್ತು ಅಂತರ್‍ರಾಷ್ಟ್ರೀಯ ಸಂಬಂಧದ ವಿವೇಕವನ್ನು ವಿಸ್ತರಿಸಬೇಕಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನವನ್ನು ನೀಡದೆ ಇರುವುದು ಕನ್ನಡ ಪರಂಪರೆಯ ಪ್ರಜ್ಞೆಗೆ ಮಾಡುವ ಅವಮಾನ. ಅಷ್ಟೇ ಅಲ್ಲದೆ, ಆಳುವ ವರ್ಗವು ತನಗೆ ತಾನೇ ಮಾಡಿಕೊಳ್ಳುವ ಅವಮಾನವಾಗಿದೆ. ಕೂಡಲೇ ರಾಜ್ಯ ಸರಕಾರ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಮುಜುಗರದಿಂದ ಪಾರಾಗಲಿ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಕನ್ನಡದ ಜಾನಪದ, ಇತಿಹಾಸ, ಪರಂಪರೆಗಳೊಂದಿಗೆ ಈ ನೆಲಮೂಲದ ಆದಿವಾಸಿ, ಅಲೆಮಾರಿಗಳಂತಹ ತಬ್ಬಲಿ ತಳಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ, ಸಂಶೋಧನೆ ಕುರಿತಂತೆ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುವ ಮಹತ್ವದ ಕೆಲಸ ಮಾಡುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಕಾರ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವುದು ಅಕ್ಷಮ್ಯ. ಇದು ಕನ್ನಡಕ್ಕೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ, ಕನ್ನಡ ನಾಡು, ನುಡಿ, ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ತಿಳಿಸಿದ್ದಾರೆ.
ಕನ್ನಡ ವಿವಿ ಕನ್ನಡ ಅಸ್ಮಿತೆಯನ್ನು ಕಟ್ಟುವ ಕೆಲಸದ ಒಂದು ಭಾಗ. ಕನ್ನಡ ಸಂಸ್ಕೃತಿಯ ಪರಂಪರೆಯ ಸಂಶೋಧನೆ ಹಾಗೂ ವರ್ತಮಾನದ ಚಿಂತನೆ ನಡೆಸುವುದಕ್ಕಾಗಿ, ದೇಸೀ ಜ್ಞಾನ ಕೋಶವನ್ನು ನಿರ್ಮಿಸುವುದಕ್ಕಾಗಿ ಇರುವ ಕನ್ನಡ ವಿವಿಗೆ ಅನುದಾನದ ಕೊರತೆಯುಂಟಾಗಿರುವುದು ಖಂಡನೀಯ. ಕನ್ನಡ ವಿವಿ ಪೋಷಣೆಗೆ ಸರಕಾರ ತಕ್ಷಣ ಅನುದಾನ ಒದಗಿಸಬೇಕೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಒತ್ತಾಯಿಸಿದ್ದಾರೆ.
ಜಾಗತೀಕರಣ ಮತ್ತು ಖಾಸಗೀಕರಣದ ಪ್ರಬಲ ಹೊಡೆತಕ್ಕೆ ಸಿಕ್ಕು ಸಾವಿರಾರು ಸಣ್ಣ ಭಾಷೆಗಳು ಇವತ್ತು ಜಗತ್ತಿನಾದ್ಯಂತ ಅವಸಾನದ ಅಂಚಿಗೆ ತಲುಪಿವೆ. ಅವುಗಳ ಧ್ವನಿ ಉಡುಗಿವೆ. ಸರಕಾರಗಳು ಈ ಕುರಿತು ನಿರ್ಲಕ್ಷ್ಯ ತೋರಿಸುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಯೂನೆಸ್ಕೋ ಈ ಕುರಿತು ಆಗಾಗ ನೀಡಿದ ಎಚ್ಚರವು ಯಾರ ಕಿವಿಗಳನ್ನೂ ತಲುಪುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸೂಕ್ತವಾದ ಅನುದಾನ ನೀಡದಿರುವುದು ರಾಜ್ಯ ಸರಕಾರದ ಕನ್ನಡ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.
-ಡಾ.ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸ