ಬಳ್ಳಾರಿ ವಿಭಜನೆ ಖಂಡಿಸಿ ಸಚಿವರ ಕಾರಿಗೆ ಹೋರಾಟಗಾರರ ಮುತ್ತಿಗೆ
ಬಳ್ಳಾರಿ, ಡಿ.23: ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಗಾರರು ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡಿಸಿ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಕಾರಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಗರದ ಹೊರವಲಯದಲ್ಲಿ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಜಿಲ್ಲೆಯ ವಿಭಜನೆ ಮಾಡದಂತೆ ಆಗ್ರಹಿಸಿದರು.
ಬಳ್ಳಾರಿ ಜಿಲ್ಲೆ ಗಡಿ ಪ್ರದೇಶದಲ್ಲಿದ್ದು, ಮುಂದೊಂದು ದಿನ ಬೆಳಗಾವಿಯ ರೀತಿಯಲ್ಲಿ ಆಗುವುದಕ್ಕೆ ಅವಕಾಶ ಮಾಡಿಕೊಡಬೇಡಿ. ಜಿಲ್ಲೆಯನ್ನು ಒಡೆಯಬೇಡಿ. ಜಿಲ್ಲೆಯ ವಿಭಜನೆ ಆಗುವುದನ್ನು ತಪ್ಪಿಸಲು ತಮ್ಮಿಂದ ಮಾತ್ರ ಸಾಧ್ಯ. ಬೇಕಾದರೆ ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಿ ಎಂದು ಒತ್ತಾಯಿಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ಪಶ್ಚಿಮ ತಾಲೂಕುಗಳ ಅಹವಾಲು ಕೂಡ ಆಲಿಸುತ್ತೇವೆ. ಆ ಕಡೆಯಿಂದ ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಗೆ ಆಡಳಿತಾತ್ಮಕವಾಗಿ ಕೆಲಸ ಮಾಡಿಕೊಳ್ಳುವುದಕ್ಕೆ ಬರಲು ಕಷ್ಟವಾಗುತ್ತದೆ. ಸಣ್ಣ ಜಿಲ್ಲೆಗಳು ಆಗುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತೆ. ತಮ್ಮ ಅಹವಾಲುಗಳು ಏನೇ ಇದ್ದರೂ ಆಕ್ಷೇಪಣೆಗೆ ಅವಕಾಶವಿದೆ ಎಂದು ಹೇಳಿದರು.