×
Ad

ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: 6 ಆರೋಪಿಗಳ ಬಂಧನ

Update: 2020-12-23 22:48 IST

ಕೋಲಾರ, ಡಿ.23: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದರು. 

ಇಂದು ಕೋಲಾರ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೊಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ತಿಂಗಳ 25 ರಂದು ವರ್ತೂರ್ ಪ್ರಕಾಶ್ ರನ್ನು ಅಪಹರಣ ಮಾಡಿದ್ದು, ಅವರನ್ನು ನ.28ರಂದು ಹೊಸಕೋಟೆ ಬಳಿ ಬಿಟ್ಟಿದ್ದರು. ಈ ಬಗ್ಗೆ ಡಿಸೆಂಬರ್ 1 ರಂದು ಬೆಂಗಳೂರು ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ನಂತರ ಕೋಲಾರಕ್ಕೆ ಕೇಸ್ ವರ್ಗವಣೆ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ಸಾಹಿಲ್ ಬಾಗ್ಲಾ (ಐಪಿಎಸ್) ಅವರ ನೇತೃತ್ವದಲ್ಲಿ 4 ತಂಡಗಳನ್ನು ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದು, ಇದುವರೆಗೂ 6 ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದರು.

ನಮ್ಮ ತಂಡವು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ತನಿಖೆ ಮಾಡಿ ತಮಿಳುನಾಡಿನ ಮಧುರೈನಲ್ಲಿ ಪ್ರಕರಣದ ಮಾಸ್ಟರ್ ಮೈಂಡ್ ಕವಿರಾಜ್‍ನನ್ನು ಬಂಧಿಸಲಾಯಿತು ಹಾಗೂ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಅವನಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಈ ಪ್ರಕರಣದ ಮುಖ್ಯ ಆರೋಪಿ ಕವಿರಾಜ್ ವಿರುದ್ಧ ಬೆಂಗಳೂರು ಸಿಟಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು. 

ಆರೋಪಿಗಳು ವರ್ತೂರ್ ಪ್ರಕಾಶ್ ಕಡೆಯಿಂದ ಒಟ್ಟು 48 ಲಕ್ಷ ರೂ. ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 20.5 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ 1 ಇನೋವಾ ಕಾರು, 2 ಮಾರುತಿ ಸ್ವಿಪ್ಟ್ ಕಾರು, 1 ಮಾರುತಿ ರಿಟ್ಟ್ ಕಾರು, 1 ಕೆ.ಟಿ.ಎಂ. ಡ್ಯೂಕ್ ದ್ವಿಚಕ್ರ ವಾಹನ ಸೇರಿದಂತೆ ಈ ಕೃತ್ಯಕ್ಕೆ ಉಪಯೋಗಿಸಿದ ಡ್ರ್ಯಾಗರ್ ಗಳು, ಬೇಸ್‍ಬಾಲ್ ಬ್ಯಾಟ್, ಮಚ್ಚು, ಕಾರಿನ ನಂಬರ್ ಪ್ಲೇಟುಗಳು, ಮಂಕಿ ಕ್ಯಾಪ್ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ಕವಿರಾಜ್ ಮೇಲೆ 10 ಪ್ರಕರಣಗಳು, ರಘು ಮೇಲೆ 7, ಲಿಖಿತ್ ಮೇಲೆ 3 ಹಾಗೂ ಪ್ರವೀಣ್ ಮೇಲೆ 1 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಆರೋಪಿಗಳ ಪತ್ತೆ ಮಾಡಿರುವ ತಂಡಕ್ಕೆ 50 ಸಾವಿರ ರೂ.ಗಳನ್ನು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಲಾಯಿತು.

ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಹ್ನವಿ, ಆರೋಪಿಗಳ ಪತ್ತೆ ಕಾರ್ಯಕ್ಕೆ ನೇಮಕಗೊಂಡಿದ್ದ ಎಎಸ್ಪಿ ಸಾಹಿಲ್ ಬಾಗ್ಲಾ, ಕೋಲಾರ ಗ್ರಾಮಾಂತರ ವೃತ್ತದ ಸಿಪಿಐ ಎಲ್.ಆಂಜಪ್ಪ, ರಾಬರ್ಟ್‍ಸನ್‍ಪೇಟೆ ವೃತ್ತದ ಸಿಪಿಐ ಸೂರ್ಯಪ್ರಕಾಶ್, ನಿಸ್ತಂತು ಪಿ.ಐ ಶಿವಶಂಕರ್, ಶ್ರೀನಿವಾಸಪುರ ವೃತ್ತ ಸಿಪಿಐ ರಾಘವೇಂದ್ರ, ಕೋಲಾರ ನಗರ ವೃತ್ತದ ಸಿಪಿಐ ವೈ.ಆರ್.ರಂಗಸ್ವಾಮಯ್ಯ, ಪೊಲೀಸ್ ಠಾಣೆ ಪಿಐ ಸಿಇಎನ್ ಜಗದೀಶ್, ಮುಳಬಾಗಿಲು ವೃತ್ತ ಸಿಪಿಐ ಗೋಪಾಲ್ ನಾಯಕ್, ವೇಮಗಲ್ ಪಿಎಸ್‍ಐ ಕೇಶವಮೂರ್ತಿ, ಕೋಲಾರ ಗ್ರಾಮಾಂತರ ಪಿಎಸ್‍ಐ ವಿ.ಕಿರಣ್, ಕೋಲಾರ ನಗರ ಠಾಣೆ ಪಿಎಸ್‍ಐ ಅಣ್ಣಯ್ಯ, ಮಾಸ್ತಿ ಠಾಣೆ ಪಿಎಸ್‍ಐ ಪ್ರದೀಪ್, ಎಎಸ್‍ಐ ಸೈಯದ್ ಖಾಸೀಂ, ಹೆಡ್ ಕಾನ್ಸ್ ಟೇಬಲ್‍ಗಳಾದ ಎಸ್.ಮಂಜುನಾಥ್, ಟಿ.ಎ ನಾಗರಾಜ್, ಎಲ್.ಮಂಜುನಾಥ, ಪೊಲೀಸ್ ಕಾನ್ಸ್ ಟೇಬಲ್‍ಗಳಾದ  ಎಸ್.ಎನ್.ಬಾಸ್ಕರ್, ಆಂಜಪ್ಪ, ಅಂಬರೀಶ್, ಆನಂದ್, ಶಿವಕುಮಾರ್, ವೆಂಕಟರವಣ, ಶ್ರೀನಾಥ್, ನವೀನ್, ಸುರೇಶ್, ರಂಜಿತ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News