×
Ad

ಮಾರುಕಟ್ಟೆಗೆ ಕೊರೋನ ಮಾರ್ಗಸೂಚಿ: ಮಾಸ್ಕ್ ಕಡ್ಡಾಯ, ಗ್ರಾಹಕರು ಅಂತರ ಕಾಯ್ದುಕೊಳ್ಳಲು ಸೂಚನೆ

Update: 2020-12-23 23:52 IST

ಬೆಂಗಳೂರು, ಡಿ.23: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುವ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲ ವಾಣಿಜ್ಯ ಮಳಿಗೆಗಳು ಆರು ಅಡಿ ಅಂತರಗಳಲ್ಲಿ ಕಡ್ಡಾಯವಾಗಿ ಚೌಕಾಕಾರ ಅಥವಾ ವೃತ್ತಾಕಾರದ ಗುರುತುಗಳನ್ನು ಹಾಕುವುದು, ಮಾಸ್ಕ್ ಪಾಲಿಸುವುದು, ಗ್ರಾಹಕರು ಅಂತರ ಕಾಯ್ದುಕೊಳ್ಳುವಂತೆ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆಯು, ಮಾರುಕಟ್ಟೆಗಳಲ್ಲಿ ಸೋಂಕು ಹರಡುವಿಕೆ ತಡೆಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದೆ. ಹಿರಿಯ ನಾಗರಿಕರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಅಗತ್ಯವಿರುವ ಸಂದರ್ಭಗಳಲ್ಲಿ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಮಾರುಕಟ್ಟೆಗಳಿಗೆ ಭೇಟಿ ನೀಡುವುದರ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಆರು ಅಡಿಗಳ ಭೌತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೈಯನ್ನು ಸ್ವಚ್ಛಗೊಳಿಸುವುದು ಉತ್ತೇಜಿಸಬೇಕಿದೆ ಎಂದು ತಿಳಿಸಲಾಗಿದೆ.

ದೈನಂದಿನ ಚಟುವಟಿಕೆ ಪ್ರಾರಂಭಿಸುವ ಮುನ್ನ ಶೇ. 1ರಷ್ಟು ಪ್ರಮಾಣದಲ್ಲಿ ಸೋಡಿಯಂ ನೈಟ್ರೇಟ್ ದ್ರಾವಣದಿಂದ ಅಥವಾ ಗ್ರಹ ಬಳಕೆಯ ಮಾರ್ಜಕದಿಂದ ಮಳಿಗೆಗಳನ್ನು ಸ್ವಚ್ಛಪಡಿಸಲು ಮಾಲಕರು ಕ್ರಮವಹಿಸಬೇಕು. ಪ್ರವೇಶ ದ್ವಾರದಲ್ಲಿಯೇ ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸರ್) ಇಡಬೇಕು. ನಿಯಮಿತ ನಿಗಾವಣೆಯನ್ನು ಮಾಡಲು ಮಾರುಕಟ್ಟೆ ಮಾಲಕರ ಸಂಘಟನೆಗಳು ಉಪ ಸಮಿತಿಗಳನ್ನು ರಚಿಸಬೇಕು. ಮಾರುಕಟ್ಟೆಗಳ ಆಗಮನ ದ್ವಾರ ಮತ್ತು ಇನ್ನಿತರ ಪ್ರವೇಶ ದ್ವಾರದಲ್ಲಿ ಸಾಮೂಹಿಕ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಯಾಗಬೇಕು ಎಂದು ತಿಳಿಸಲಾಗಿದೆ.

ನಿಯಮ ಪಾಲಿಸದಿದ್ದಲ್ಲಿ ದಂಡ: ಮುಖಗವಸನ್ನು ಖರೀದಿಸಲು ಸಾಧ್ಯವಾಗದವರಿಗೆ ಉಚಿತವಾಗಿ ಮುಖಗವಸುಗಳನ್ನು ನೀಡುವುದು ಮತ್ತು ಅದನ್ನು ಬಳಸಲು ಮಾಲಕರು ಉತ್ತೇಜಿಸಬೇಕು. ದೈಹಿಕ ಅಂತರ ಮಾನದಂಡಗಳನ್ನು ಪಾಲನೆ ಮಾಡದಿರುವವರಿಗೆ ಹಾಗೂ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲಾಗುವುದು. ದಿನಬಿಟ್ಟು ದಿನ ಮಾರುಕಟ್ಟೆ, ಮಳಿಗೆ ತೆರೆಯಲಿರುವ ಕ್ರಮಗಳನ್ನು ಆಲೋಚಿಸಬೇಕು ಎಂದು ಸುತ್ತೋಲೆಯಲ್ಲಿ ಸೇರಿದ್ದು, ನಿಯಮಗಳು ಪಾಲನೆಯಾಗದಿದ್ದಲ್ಲಿ ಮಾಲಕರಿಗೆ ದಂಡ ವಿಧಿಸಲಾಗುವುದು. ಹೆಚ್ಚಿನ ಪ್ರಕರಣಗಳು ವರದಿಯಾದಲ್ಲಿ ಮಾರುಕಟ್ಟೆ ಮುಚ್ಚಲಾಗುವುದು ಎಂದು ಎಚ್ಚರಿಸಲಾಗಿದೆ.

ಸಾರ್ವಜನಿಕವಾಗಿ ಜನದಟ್ಟಣೆ ಆಗದಂತೆ ನೋಡಿಕೊಳ್ಳಲು ಮಾರ್ಷಲ್‍ಗಳು, ಗೃಹರಕ್ಷಕ ದಳಗಳು ಮತ್ತು ಸ್ವಯಂ ಸೇವಕರ ಸೇವೆ ಬಳಸಿಕೊಳ್ಳಬೇಕು. ದೈನಂದಿನ ಬಳಕೆಯ ವಸ್ತುಗಳ ಖರೀದಿಗೆ ಆನ್‍ಲೈನ್ ವ್ಯವಸ್ಥೆಯನ್ನು ಉತ್ತೇಜಿಸಬೇಕು. ಸರಕಾರದ ಮಾರ್ಗಸೂಚಿಗಳನ್ನು ಮಾಲಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News