ಮೇಲ್ವರ್ಗದ ಯುವಕನಿಂದ ದಲಿತ ವ್ಯಕ್ತಿಗೆ ಹಲ್ಲೆ ಆರೋಪ: ದೂರು ದಾಖಲು

Update: 2020-12-23 18:26 GMT

ಚಿಕ್ಕಮಗಳೂರು, ಡಿ.22: ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ವರ್ಗದ ಯುವಕನೊಬ್ಬ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ದೊಡ್ಡಮಾಗರವಳ್ಳಿ ಗ್ರಾಮದ ದಲಿತ ಸಮುದಾಯದ ಲೋಕೇಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಲೋಕೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಗ್ರಾಮದ ರಾಕೇಶ್ ಹಲ್ಲೆ ಮಾಡಿರುವ ಆರೋಪಿಯಾಗಿದ್ದು, ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮಂಗಳವಾರ ದೊಡ್ಡಮಾಗರವಳ್ಳಿ ಗ್ರಾಪಂ ಚುನಾವಣೆಯ ಮತದಾನದ ಸಂದರ್ಭ ಲೋಕೇಶ್ ಹಾಗೂ ರಾಕೇಶ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ರಾಕೇಶ್ ಕುಡಿದ ಮತ್ತಿನಲ್ಲಿ ಲೋಕೇಶ್ ಮನೆಯ ಬಳಿ ಬಂದು, ನನ್ನಿಂದ ತಪ್ಪಾಗಿದೆ, ಕ್ಷಮೆಯಾಚನೆ ಮಾಡಬೇಕೆಂದು ಲೋಕೇಶ್‍ನನ್ನು ಮನೆಯಿಂದ ಹೊರಗೆ ಕರೆದಿದ್ದಾನೆ. ಲೋಕೇಶ್ ಮನೆಯಿಂದ ಹೊರ ಬಂದಾಗ ಆತನ ಕಾಲು ಹಿಡಿದು ಕ್ಷಮೆಯಾಚನೆ ಮಾಡುವ ನಾಟಕವಾಡಿದ ರಾಕೇಶ್ ದೊಣ್ಣೆಯಿಂದ ಲೋಕೇಶ್ ಮೇಲೆ ಮನಬಂದಂತೆ ಥಳಿಸಿದ್ದಲ್ಲದೇ ಜಾತಿ ನಿಂದನೆಯನ್ನೂ ಮಾಡಿದ್ದಾನೆ. ಈ ವೇಳೆ ಲೋಕೇಶ್ ಕಡೆಯವರು ಅಡ್ಡ ಬಂದು ರಾಕೇಶ್‍ನನ್ನು ತಡೆದಿದ್ದಾರೆಂದು ಆರೋಪಿಸಲಾಗಿದೆ.

ಹಲ್ಲೆಯಿಂದಾಗಿ ಲೋಕೇಶ್ ಮೈ, ಕೈ, ಬೆನ್ನಿಗೆ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News