ಬಿಎಸ್‌ವೈ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣ: ವಿಚಾರಣೆಗೆ ಜನವರಿಯಲ್ಲಿ ದಿನ ನಿಗದಿಪಡಿಸಿದ ಸುಪ್ರೀಂಕೋರ್ಟ್

Update: 2020-12-24 12:59 GMT

ಬೆಂಗಳೂರು, ಡಿ.24: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲು ಕಾನೂನು ಬಾಹಿರವಾಗಿ ಆದೇಶಿಸಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ 2021ರ ಜ.21ರಂದು ವಿಚಾರಣೆ ನಡೆಸಲು ಪಟ್ಟಿ ಮಾಡಿದೆ.

ಬೆಳ್ಳಂದೂರು ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಿಚಾರಣೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿರುವ ಬೆನ್ನಲ್ಲೇ ಸುಪ್ರೀಂಕೋರ್ಟ್ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದ ವಿಚಾರಣೆಯನ್ನು ಜನವರಿಯಲ್ಲಿ ನಡೆಸಲು ಪಟ್ಟಿ ಮಾಡಿದೆ. ಇದರಿಂದ, ಸುಪ್ರೀಂಕೋರ್ಟ್ ನೀಡುವ ತೀರ್ಪು ಕೂಡ ಬಹಳಷ್ಟು ಕುತೂಹಲ ಮೂಡಿಸಿದೆಯಲ್ಲದೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯವೂ ನಿರ್ಧರಿತವಾಗಲಿದೆ ಎಂದು ಹೇಳಲಾಗುತ್ತಿದೆ.

ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಶಿವರಾಮ ಕಾರಂತ ಬಡಾವಣೆ ಪ್ರಕರಣವು 2017ರಲ್ಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 2018ರಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಆ ಬಳಿಕ ವಿಚಾರಣೆ ದಿನಾಂಕ ಹಲವು ಬಾರಿ ಮುಂದೂಡಿಕೆಯಾಗಿತ್ತು.

ಬಿಎಸ್‍ವೈ ಅವರು ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಪ್ರತ್ಯೇಕ ಎರಡು ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಎಫ್‍ಐಆರ್ ಗಳಿಗೆ ತಡೆಯಾಜ್ಞೆ ನೀಡಿ ಆದೇಶಿಸಿದ್ದ ಪ್ರಕರಣವನ್ನು ಸಿಬಿಐಯು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು.

ಏನಿದು ಪ್ರಕರಣ: ಬಿಎಸ್‍ವೈ ವಿರುದ್ದ ಡಿ.ಅಯ್ಯಪ್ಪ ಎನ್ನುವವರು 2017ರ ಜೂ.7ರಂದು ದೂರು ದಾಖಲಿಸಿದ್ದರು. ಯಡಿಯೂರಪ್ಪ ವಿರುದ್ಧ ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ಎಸಗಿದ ಆರೋಪವು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಹಾಗೆಯೇ ಆರೋಪವನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವ ಪೂರಕ ದಾಖಲೆಗಳನ್ನೂ ದೂರುದಾರರು ತಮ್ಮ ದೂರಿನ ಜತೆಗೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News