ಪತ್ನಿ, ಮಕ್ಕಳಿಗೆ ಜೀವನಾಂಶ ಪಾವತಿಸದಿರಲು ನಿರುದ್ಯೋಗ, ಕಡಿಮೆ ವರಮಾನ ಸಕಾರಣಗಳಲ್ಲ: ಹೈಕೋರ್ಟ್
ಬೆಂಗಳೂರು, ಡಿ.24: ಅಪ್ರಾಪ್ತ ಪುತ್ರ ಪ್ರೌಢಾವಸ್ಥೆಗೆ ಬರುವವರಿಗೆ ಪ್ರತಿ ತಿಂಗಳು 3,500 ರೂ. ಪಾವತಿಸುವಂತೆ ತಂದೆಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ಪಾವತಿಸದಿರಲು ನಿರುದ್ಯೋಗ, ಕಡಿಮೆ ವರಮಾನದ ಕಾರಣಗಳನ್ನು ಪತಿ ನೀಡುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಈ ಕುರಿತು ಸುನಿಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಿಆರ್‍ಪಿಸಿ ಸೆಕ್ಷನ್ 125ರ ಅಡಿ ಪತ್ನಿ ಮತ್ತು ಮಕ್ಕಳ ಜೀವನಾಂಶ ಪಾವತಿಸದಿರಲು ನಿರುದ್ಯೋಗ, ಕಡಿಮೆ ವರಮಾನದ ಕಾರಣಗಳನ್ನು ಪತಿ ನೀಡುವಂತಿಲ್ಲ ಎಂದು ಹೇಳಿದೆ.
ಅಪ್ರಾಪ್ತ ಮಗುವಿನ ಜೀವನ ನಿರ್ವಹಣೆಯು ತಂದೆಯ ವೈಯಕ್ತಿಕ ಜವಾಬ್ದಾರಿಯಾಗಿದೆ. ಹೀಗಾಗಿ, ಕೂಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಯಿಂದ ಅದರಲ್ಲೂ ಅಪ್ರಾಪ್ತ ಬಾಲಕನ ಜೀವನ ನಿರ್ವಹಣೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಾಲಯ ಹೇಳಿದೆ.
ಪತಿ-ಪತ್ನಿಯು ವಿಚ್ಛೇದನ ಪಡೆದ ಬಳಿಕ ಇಬ್ಬರೂ ವಿಭಿನ್ನ ಬದುಕಿನ ದಾರಿ ಹಿಡಿದಿದ್ದು, ಅಪ್ರಾಪ್ತ ಮಗುವನ್ನು ನ್ಯಾಯಾಲಯ ತಾಯಿಯ ಮಡಿಲಿಗೆ ಹಾಕಿತ್ತು. ಸುಸ್ಥಿತಿಯಲ್ಲಿದ್ದರೂ ತಂದೆಯು ತನ್ನ ಜೀವನ ನಿರ್ವಹಣೆಗೆ ನ್ಯಾಯಾಲಯ ಆದೇಶಿಸಿದಷ್ಟು ಜೀವನಾಂಶ ಪಾವತಿಸುತ್ತಿಲ್ಲ ಎಂದು ಆರೋಪಿಸಿ ಅಪ್ರಾಪ್ತ ಬಾಲಕನು ತಾಯಿಯ ಮೂಲಕ ಸಿಆರ್‍ಪಿಸಿ ಸೆಕ್ಷನ್ 125ರ ಅಡಿ ಜೀವನಾಂಶ ಕೊಡಿಸುವಂತೆ ನ್ಯಾಯಾಲಯವನ್ನು ಕೋರಿ ಕೊಂಡಿದ್ದನು.
ಮಗುವಿನ ಆರೈಕೆ ಮಾಡುವುದರಿಂದ ಉದ್ದೇಶಪೂರ್ವಕವಾಗಿ ತಂದೆ ವಿಮುಖವಾಗುತ್ತಿದ್ದಾರೆ ಎಂಬುದನ್ನು ಪತ್ನಿಯು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಜೀವನ ನಿರ್ವಹಣೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಜಾಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಾದಿಸಿದ್ದ ವಕೀಲರು, ತನ್ನ ಕಕ್ಷಿದಾರರು ಕೂಲಿ ಕೆಲಸ ಮಾಡುತ್ತಿದ್ದು, ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪಾಲಿಸಲು ಕಕ್ಷಿದಾರರು ಅರ್ಹವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು. ಅರ್ಜಿದಾರರ ವಾದದಲ್ಲಿ ತಿರುಳಿಲ್ಲ ಎಂದು ಭಾವಿಸಿರುವ ನ್ಯಾಯಾಲಯವು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯು ಆಸ್ತಿ ಹೊಂದಿದ್ದರೂ ಅಥವಾ ಹೊಂದಿಲ್ಲದಿದ್ದರೂ ತನ್ನ ಪತ್ನಿ, ಅಪ್ರಾಪ್ತ ಪುತ್ರರು ಮತ್ತು ಅವಿವಾಹಿತ ಪುತ್ರಿಯರು, ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದು ಕಾನೂನಾತ್ಮಕ ಜವಾಬ್ದಾರಿಯಾಗಿದೆ ಎಂದಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ತಂದೆಯು ಜೀವನಾಂಶ ಪಾವತಿಸಿದ್ದರೆ ಬಾಲಕ ಅದನ್ನು ತನ್ನ ಶಿಕ್ಷಣಕ್ಕೆ ಬಳಸಿಕೊಳ್ಳುತ್ತಿದ್ದ. ಈ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಅಲಂಕರಿಸುತ್ತಿದ್ದ ಎಂದು ನ್ಯಾಯಾಲಯ ಹೇಳಿದೆ. ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಜೀವನ ನಿರ್ವಹಣೆ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿದೆ.