ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.15ರಿಂದ ಎರಡು ದಿನಗಳ ಕರ್ನಾಟಕ ಪ್ರವಾಸ
ಬೆಂಗಳೂರು, ಡಿ.24: ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.15ರಿಂದ ಎರಡು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಸಚಿವ ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಎಂಬ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ. ಸಂಕ್ರಾಂತಿ ಹಬ್ಬ ಶುಭ ಸುದ್ದಿಯನ್ನು ಹೊತ್ತು ತರಲಿದೆ ಎಂಬ ನಿರೀಕ್ಷೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ತಿಂಗಳು ಹೊಸದಿಲ್ಲಿಗೆ ತೆರಳಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಚರ್ಚೆ ನಡೆಸಿ ಬಂದಿದ್ದರು. ಆದರೆ, ಈ ಸಂದರ್ಭದಲ್ಲಿ ಅಮಿತ್ ಶಾ ಜೊತೆ ಮಾತುಕತೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ, ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ, ಸಚಿವ ಸಂಪುಟದ ಭವಿಷ್ಯದ ಕುರಿತು ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರಾವತಿಯಲ್ಲಿ ಸಿಆರ್‍ಎಫ್‍ಟಿ ತರಬೇತಿ ಕೇಂದ್ರದ ಉದ್ಘಾಟನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿಯಾಗಿ ನೇಮಕವಾಗಿರುವ ಅರುಣ್ ಸಿಂಗ್ ಜೊತೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲೂ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಚರ್ಚೆ ನಡೆಸಿದ್ದರು. ಅಮಿತ್ ಶಾ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ಶಾಸಕ ಹಾಗೂ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಮುನಿರತ್ನ, ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಬಯಸಿದ್ದು, ಇವರ ಹೆಸರುಗಳನ್ನು ಬಿಜೆಪಿ ಹೈಕಮಾಂಡ್‍ಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ, ಸಚಿವ ಸಂಪುಟದಲ್ಲಿ 7 ಸ್ಥಾನಗಳು ಖಾಲಿಯಿದ್ದು, ಈ ಪೈಕಿ ಇಬ್ಬರು ಸಚಿವರನ್ನು ಕೈ ಬಿಟ್ಟು, ಈ ಐವರೊಂದಿಗೆ ಉಳಿದ ಇಬ್ಬರು ಹೊಸಬರಿಗೆ ಅವಕಾಶ ಕಲ್ಪಿಸಿಕೊಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.