ಮಾಸ್ಕ್ ಧರಿಸದ್ದಕ್ಕೆ ಬಿಜೆಪಿ ಶಾಸಕನಿಗೆ ದಂಡ: ಪೊಲೀಸರ ವಿರುದ್ಧವೇ ದೂರು ನೀಡಿದ ಶಾಸಕ

Update: 2020-12-24 15:52 GMT
ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು, ಡಿ.24: ಕಾರಿನಲ್ಲಿ ಮಾಸ್ಕ್ ರಹಿತ ಪ್ರಯಾಣ ಮಾಡಿದ ಆರೋಪದಡಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪೊಲೀಸರು 250 ರೂ. ದಂಡ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಗುರುವಾರ ನಗರದ ಶೇಷಾದ್ರಿಪುರಂ ಸಂಚಾರ ಠಾಣಾ ಪೊಲೀಸರು, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕಾರಿನಲ್ಲಿ ಮಾಸ್ಕ್ ಬಳಕೆ ಮಾಡದೆ ಪ್ರಯಾಣ ಮಾಡಿರುವುದನ್ನು ಕಂಡು 250 ರೂ.ದಂಡ ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಈ ಘಟನೆ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿರುವ ಎಂ.ಪಿ.ಕುಮಾರಸ್ವಾಮಿ, ನಾನು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕ ಭವನಕ್ಕೆ ತೆರಳುತ್ತಿದ್ದೆ. ಆಗ ಶೇಷಾದ್ರಿಪುರಂ ಪೊಲೀಸ್‍ ಠಾಣೆ ಮುಂಭಾಗ ಸಂಚಾರ ವ್ಯತ್ಯಯದಿಂದ ಕಾರು ನಿಲುಗಡೆಯಾಗಿತ್ತು.

ಆ ವೇಳೆ ಕಾರಿನ ಟಿಂಟ್ ಗ್ಲಾಸ್ ಇಳಿಸುವಂತೆ ಬಲವಂತವಾಗಿ ಒತ್ತಡ ಹೇರಿ ಕಾರಿನೊಳಗೆ ಇದ್ದ ನನಗೆ ಮಾಸ್ಕ್ ಹಾಕಿದ್ದರೂ 250 ರೂ. ದಂಡ ವಿಧಿಸಿದ್ದಾರೆ. ಪೊಲೀಸರ ಈ ವರ್ತನೆಯಿಂದ ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಅವರಿಗೆ ಮರುಮಾತನಾಡದೆ ದಂಡ ಕಟ್ಟಿದ್ದೇನೆ ಎಂದು ಹೇಳಿದರು.

ಆದರೆ, ವಿನಾಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News