ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಬೀಗ ಜಡಿದ ಎಡಿಜಿಪಿ ಭಾಸ್ಕರ್ ರಾವ್

Update: 2020-12-24 16:40 GMT

ಶಿವಮೊಗ್ಗ, ಡಿ.24: ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಬೀಗ ಹಾಕಿ ಬೀಗದ ಕೀಯನ್ನು ಎಡಿಜಿಪಿ ಭಾಸ್ಕರ್ ರಾವ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಭಾಸ್ಕರ್ ರಾವ್ ಅವರು ಸೋಮವಾರ ನಗರದ ಡಿಎಆರ್ ಆವರಣದಲ್ಲಿರುವ ಆಂತರಿಕ ಭದ್ರತಾ ವಿಭಾಗಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ಪ್ರಕರಣ ದಾಖಲಿಸುತ್ತಿಲ್ಲವೆಂದು ಎಡಿಜಿಪಿ ಈ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಭದ್ರತಾ ವಿಭಾಗದ ಎಸ್ಪಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕಚೇರಿಗೆ ಬೀಗ ಹಾಕಿಕೊಂಡು ಕೀ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಬ್ಬಂದಿ ಪರದಾಟ: ಎಡಿಜಿಪಿ ಕಚೇರಿಗೆ ಬೀಗ ಹಾಕಿಕೊಂಡು ಹೋದ ಪರಿಣಾಮ‌ ಕೆಲಸ‌ ಮಾಡಲು ಸಾಧ್ಯವಾಗದೆ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಪರದಾಟ ಅನುಭವಿಸುವಂತಾಗಿದೆ. ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಿಯಾಗಿ‌ ಕೆಲಸ‌ ಮಾಡದಿದ್ದರೆ ಚಾರ್ಜ್ ಮೆಮೋ ನೀಡಿ ಉತ್ತರ ಪಡೆಯುವುದು ವಾಡಿಕೆ. ಆದರೆ ಈಗ ಬೀಗ ಜಡಿದಿರುವುದು ವಿಶೇಷವಾಗಿದೆ.

ಶೆಡ್ ರೀತಿಯ ಕಚೇರಿ
ಶಿವಮೊಗ್ಗದಲ್ಲಿರುವ ಆಂತರಿಕ ಭದ್ರತಾ ವಿಭಾಗದ ಕಚೇರಿ ಬಹಳ ಚಿಕ್ಕದಾಗಿದೆ. 10 ಅಡಿ ಅಗಲ, ಉದ್ದದ ಶೆಡ್ ರೀತಿಯಲ್ಲಿ ಕಚೇರಿ ಇದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಆಂತರಿಕ ಭದ್ರತಾ ವಿಭಾಗದ ಪೊಲೀರರಿಗೆ ದೂರು ದಾಖಲಿಸಲು ಕಂಪ್ಯೂಟರ್ ಕೂಡ ಇಲ್ಲ ಎನ್ನಲಾಗುತ್ತಿದೆ.

ಇನ್ನು ಆಂತರಿಕ ಭದ್ರತಾ ವಿಭಾಗಕ್ಕೆ ಯಾವುದೇ ಶಸ್ತ್ರಾಸ್ತ್ರಗಳನ್ನು ನೀಡಿಲ್ಲ. ಇವರಿಗೊಂದು ಠಾಣೆ ನೀಡಿಲ್ಲ. ಆರೋಪಿಗಳನ್ನು ಬಂಧಿಸಿದರೆ ವಿಚಾರಣೆ ಮಾಡಲು ರೂಂ ಕೂಡಾ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ದಾಳಿ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News