ಕೇರಳದಲ್ಲಿ ಹರಡುತ್ತಿರುವ ಶಿಗೆಲ್ಲಾ ಸೋಂಕು ಅಪಾಯಕಾರಿಯೇ? ರೋಗ ಲಕ್ಷಣಗಳೇನು?

Update: 2020-12-24 18:20 GMT

ಕ್ಯಾಲಿಕಟ್,ಡಿ.24: ಕೊರೋನ ವೈರಸ್ ವಿರುದ್ಧ ಹೋರಾಟಗಳು ನಡೆಯುತ್ತಿರುವಂತೆಯೇ ಕೇರಳದ ಕ್ಯಾಲಿಕಟ್ ನಲ್ಲಿ ನೂತನ ಸೋಂಕೊಂದು ಜನರನ್ನು ಭಯಭೀತರನ್ನಾಗಿಸಿದೆ. ಈಗಾಗಲೇ 36 ಮಂದಿಗೆ ಸೋಂಕು ತಗಲಿದ್ದು, 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 11 ವರ್ಷದ ಬಾಲಕನೋರ್ವ ಈ ಸೋಂಕಿಗೆ ಬಲಿಯಾದ ಬಳಿಕ ಕ್ಯಾಲಿಕಟ್ ಜಿಲ್ಲಾಡಳಿತವು ತುರ್ತು ಸಭೆಯನ್ನು ಕರೆದಿತ್ತು. ಸದ್ಯ ಈ ಸೋಂಕು ನಿಯಂತ್ರಣದಲ್ಲಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ನಾಗರಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಆದೇಶಿಸಿದೆ.

ಶಿಗೆಲ್ಲಾ ಸೋಂಕು ಎಂದರೇನು?

ಶಿಗೆಲ್ಲೋಸಿಸ್ ಅಥವಾ ಶಿಗೆಲ್ಲಾ ಸೋಂಕು ಮನುಷ್ಯನ ಕರುಳಿಗೆ ಬಾಧಿಸುತ್ತದೆ. ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಉಂಟಾಗುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಈ ಸೋಂಕು ಬಾಧಿಸಿದರೆ ಮೃತಪಡುವ ಸಾಧ್ಯತೆಗಳಿವೆ. ಹಿಂದುಳಿದ ರಾಷ್ಟ್ರಗಳಾದ ಆಫ್ರಿಕಾ ಮತ್ತು ದಕ್ಷಿಣ ಏಶ್ಯಾ ಭಾಗಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ.

ಸಾಮಾನ್ಯ ಲಕ್ಷಣಗಳು ಯಾವುವು?

ಬೇಧಿ (ಕೆಲವು ಪ್ರಕರಣಗಳಲ್ಲಿ ರಕ್ತಸ್ರಾವ ಹಾಗೂ ತೀವ್ರ ನೋವುಂಟಾಗುತ್ತದೆ)

ಹೊಟ್ಟೆ ನೋವು

ಜ್ವರ

ತಲೆಸುತ್ತುವುದು

ವಾಂತಿ

ಇದು ಸಾಂಕ್ರಾಮಿಕ ರೋಗವೇ? ಹರಡುವ ಬಗೆ ಹೇಗೆ?

ಹೌದು. ಶಿಗೆಲ್ಲಾ ಒಂದು ಸಾಂಕ್ರಾಮಿಕ ರೋಗ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಇದ್ದರೆ ಸೋಂಕು ತಗಲುತ್ತದೆ. ಉದಾಹರಣೆಗೆ ಮಗುವಿಗೆ ಆಹಾರ ನೀಡುವಾಗ ಕೈ ತೊಳೆಯದಿದ್ದರೆ ಅಥವಾ ನೈರ್ಮಲ್ಯವಿಲ್ಲದ ಆಹಾರವನ್ನು ಸೇವಿಸಿದರೆ ಈ ಸೋಂಕು ಹರಡುತ್ತದೆ. ಬಹುತೇಕ ಪ್ರಕರಣಗಳಲ್ಲಿ ಲಕ್ಷಣಗಳು ಒಂದು ವಾರದ ಬಳಿಕ ಕಾಣಿಸಿಕೊಳ್ಳುತ್ತದೆ.

ಶಿಗೆಲ್ಲಾ ಸೋಂಕು ಅಪಾಯಕಾರಿಯೇ?

ಹೆಚ್ಚೇನೂ ಅಪಾಯಕಾರಿಯಲ್ಲ. ಕೆಲವು ದಿನಗಳ ಕಾಲ ಬೇಧಿ, ಅತಿಸಾರ ಉಂಟಾಗುತ್ತದೆ ಹಾಗೂ ಕ್ರಮೇಣ ಕಡಿಮೆಯಾಗುತ್ತದೆ. ಅದರೊಂದಿಗೆ ಜ್ವರ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು

ಶಿಗೆಲ್ಲಾ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ನಿಮ್ಮ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ. ಮಕ್ಕಳಿಗೆ ಆಹಾರ ನೀಡುವಾಗಲಂತೂ ಕೈಗಳನ್ನು ಸ್ವಚ್ಛವಾಗಿಡಿ (ಮಕ್ಕಳಲ್ಲಿ ಈ ಸೋಂಕು ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ

ಆಹಾರ ಸೇವಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳಿ

ಬಿಸಿ ನೀರನ್ನು ಹೆಚ್ಚಾಗಿ ಕುಡಿಯಿರಿ

ನೀರಿನಲ್ಲಿ ಈಜುವ ಸಂದರ್ಭದಲ್ಲಿ ಕೆರೆ, ನದಿ, ಸಮುದ್ರದ (ಇತರ ಯಾವುದೇ ಮೂಲಗಳ) ನೀರನ್ನು ಕುಡಿಯದಂತೆ ಜಾಗ್ರತೆ ವಹಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News