×
Ad

ಭೂ ಸುಧಾರಣಾ ಕಾಯ್ದೆಗೆ ಜೆಡಿಎಸ್ ಬೆಂಬಲಕ್ಕೆ ವೈ.ಎಸ್.ವಿ ದತ್ತಾ ಅಸಮಾಧಾನ

Update: 2020-12-25 13:45 IST

ಶಿವಮೊಗ್ಗ, ಡಿ.25: ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಸದನದಲ್ಲಿ ಬೆಂಬಲ ನೀಡಿರುವ ತಮ್ಮದೇ ಪಕ್ಷದ ನಾಯಕರು ವಿರುದ್ದ ಜೆಡಿಎಸ್ ವಕ್ತಾರ, ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅಸಮಾಧಾನ ಹೊರ ಹಾಕಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತನ್ನ ವಿರೋಧವಿದೆ ಎಂದರು.

ಭೂ ಸುಧಾರಣಾ ಕಾಯ್ದೆಗೆ ರೈತರಿಂದ ವಿರೋಧ ವ್ಯಕ್ತವಾದ ನಂತರ ಕಾಯ್ದೆಗೆ ಕೆಲವು ತಿದ್ದುಪಡಿ ತರುವಂತೆ ಜೆಡಿಎಸ್ ರಾಜ್ಯ ಸರಕಾರಕ್ಕೆ ಸಲಹೆ ನೀಡಿತ್ತು. ಆದರೆ ಏಕಾಏಕಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಜೆಡಿಎಸ್ ನಾಯಕರು ಸಹಿ ಹಾಕಿರುವುದಕ್ಕೆ ನನ್ನ ವಿರೋಧವಿದೆ. ಜೊತೆಗೆ ಪಕ್ಷ ಬೆಂಬಲ ನೀಡಿರುವುದಕ್ಕೆ ಅಸಮಾಧಾನವಿದೆ ಎಂದರು.
ಬಿಜೆಪಿ ಜೊತೆ ಜೆಡಿಎಸ್ ವಿಲೀನದ ಬಗ್ಗೆ ಪ್ರತಿಕ್ರಿಯಿಸಿದ ದತ್ತಾ ಅವರು, ಬಿಜೆಪಿ ಜೊತೆ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ ಎಂದು

ಎಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ. ಇದುವರೆಗೂ ಯಾವುದೇ ನಾಯಕರು ಈ ಬಗ್ಗೆ ಹೇಳಿಕೆ ನೀಡಿಲ್ಲ. ಸದ್ಯ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂಬುದು ಸಮಾಧಾನವಾಗಿದೆ ಎಂದು ಹೇಳಿದರು.

ಜೆಡಿಎಸ್  ಮೂಲಭೂತ ತತ್ವಗಳಿಗೆ ಬದ್ಧವಾಗಿರುವ ಪಕ್ಷ. ವೈಚಾರಿಕತೆ ಮತ್ತು ವೈಜ್ಞಾನಿಕವಾಗಿ ನಮ್ಮ ಪಕ್ಷದ ಜೊತೆ ಬಿಜೆಪಿ ಸರಿ ಹೊಂದುವುದಿಲ್ಲ. ದೇವೆಗೌಡರಿಗೆ ಇಷ್ಟವಿಲ್ಲದ ತೀರ್ಮಾನ ಎಚ್.ಡಿ.ಕುಮಾರಸ್ವಾಮಿ ಮಾಡುವುದಿಲ್ಲ. ಒಂದುವೇಳೆ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಅನಿವಾರ್ಯ ಎಂದಾಗ, ನಾವು ವಿರೋಧ ವ್ಯಕ್ತಪಡಿಸುವುದು ಖಚಿತ ಎಂದರು.

ನಮ್ಮ ಮನಸ್ಥಿತಿ ಬೇರೆ, ಬಿಜೆಪಿಯದ್ದೇ ಬೇರೆ. ಪ್ರಾದೇಶಿಕ ಪಕ್ಷಗಳು ತನ್ನತನವನ್ನು ಉಳಿಸಿಕೊಂಡು ಹೋಗುತ್ತಿವೆ. ಅಧಿಕಾರ ಇರಲಿ ಬಿಡಲಿ, ಜನರು ಗುರುತಿಸುವ ರೀತಿ ನಮ್ಮ ಪಕ್ಷದ ಸಿದ್ಧಾಂತದ ಅಡಿಯಲ್ಲಿ ನಡೆಯಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News