×
Ad

ಕುರುಬರಿಗೆ ಎಸ್ಟಿ ಮೀಸಲಾತಿಗೆ ಒತ್ತಾಯಿಸಿ 340 ಕಿ.ಮಿ.ಪಾದಯಾತ್ರೆ: ಮಾಜಿ ಸಚಿವ ಎಚ್.ಎಂ.ರೇವಣ್ಣ

Update: 2020-12-25 18:13 IST

ತುಮಕೂರು, ಡಿ.25: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ 340 ಕಿಲೋ ಮೀಟರ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ನಗರದ ಬೀರೇಶ್ವರ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿನೆಲೆಯಿಂದ ಜ.15ರಂದು ಆರಂಭಗೊಳ್ಳಲಿರುವ ಪಾದಯಾತ್ರೆ ಫೆ.2ರಂದು ಬೆಂಗಳೂರು ತಲುಪಲಿದ್ದು, ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸುವ ಮೂಲಕ ಪಕ್ಷಾತೀತವಾಗಿ ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು.

ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕಾಗಿ ಈಗಾಗಲೇ ರಾಜ್ಯದಲ್ಲಿ ಜನಪ್ರತಿನಿಧಿಗಳು, ಮಹಿಳಾ ಪ್ರತಿನಿಧಿಗಳು ಸೇರಿಸಂತೆ ಸಮುದಾಯದ ಮುಖಂಡರ ಸಭೆಯನ್ನು ನಡೆಸಲಾಗಿದೆ. ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸಲಾಗಿದ್ದು, ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

1976ರಲ್ಲಿ ದೇವರಾಜ ಅರಸು ಅವರು ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಲೋಕಸಭೆಗೆ ಶಿಫಾರಸ್ಸು ಮಾಡಿದ್ದರು.1994ರಲ್ಲಿ ಸಿದ್ದರಾಮಯ್ಯ ಅವರು ಹಾಲುಮತವನ್ನು ಕುರುಬ ಸಮುದಾಯದೊಂದಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು. ಆದರೆ ರಾಜಕೀಯ ಒತ್ತಡದಿಂದ ವಿಫಲಗೊಂಡಿತು ಎಂದು ತಿಳಿಸಿದರು.

1935ರ ಗೆಜೆಟಿಯರ್ ನಲ್ಲಿ ಕುರುಬ ಸಮುದಾಯ ಎಸ್ಟಿ ಪಟ್ಟಿಯಲ್ಲಿ ಇದೆ. ರಾಜ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಕುರುಬ, ಜೇನು ಕುರುಬ ಹಾಗೂ ಬೀದರ್ ಭಾಗದಲ್ಲಿ ಗೊಂಡ ಸಮುದಾಯ ಎಸ್ಟಿ ಪಟ್ಟಿಯಲ್ಲಿ ಇದ್ದು, ಉಳಿದ ಕಡೆ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಕೊಡಗು ಜಿಲ್ಲೆಯಲ್ಲಿ ಹಾಲುಮತ ಸಮುದಾಯವು ಕುರುಬ ಸಮುದಾಯದವರು. ಆದರೆ ಅವರನ್ನು ಹೊರಗೆ ಇಡಲಾಗಿದೆ ಎಂದು ರೇವಣ್ಣ ತಿಳಿಸಿದರು.

ಎಸ್ಟಿ ಮೀಸಲಾತಿ ಹೋರಾಟ ಕಾಗಿನೆಲೆ ಸ್ವಾಮೀಜಿ ಅವರ ನೇತೃತ್ವದಲ್ಲಿ, ಪಕ್ಷಾತೀತವಾಗಿ ನಡೆಯುತ್ತಿದ್ದು, ಎಲ್ಲ ಪಕ್ಷದ ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸೀಮತವಾದ ನಾಯಕನಲ್ಲ,ಅವರು ಅಹಿಂದ ನಾಯಕ ಹಾಗಾಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದರು.

ಕುರುಬ ಸಮುದಾಯಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ದೇವರಾಜ ಅರಸು ಅವರು ಸಾಕಷ್ಟು ಚಿಂತಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಸಿದ್ದರಾಮಯ್ಯ ಅವರು 400 ಕೋಟಿ ಅನುದಾನ ನೀಡಿದ್ದರು. ಆದರೆ ಯಡಿಯೂರಪ್ಪ ಎಂಭತ್ತು ಕೋಟಿ ಅನುದಾನ ನೀಡಿದ್ದಾರೆ. ಎಲ್ಲ ಸಮುದಾಯಕ್ಕೂ ನಿಗಮ ಸ್ಥಾಪಿಸುವಾಗ, ನಮ್ಮ ಸಮುದಾಯಕ್ಕೂ ನಿಗಮ ಸ್ಥಾಪಿಸಲು ಒತ್ತಾಯಿಸಲಾಗಿದೆ ಎಂದರು.

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಎಸ್ಟಿ ಮೀಸಲಾತಿ ಹೋರಾಟದಲ್ಲಿ ಇರುವುದು ಕೇವಲ ಕುರುಬರೇ ಹೊರತು ಯಾವ ಆರೆಸ್ಸೆಸ್ ಮುಖಂಡರಾಗಲಿ, ಆರೆಸ್ಸೆಸ್ ಹಣವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ರೇವಣಸಿದ್ದೇಶ್ವರ ಮಠದ ಬಿಂಧುಶೇಖರ್ ಒಡೆಯರ್, ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಇಂದ್ರಕುಮಾರ್, ಆರ್.ಎಂಸಿ.ರಾಜು, ಪಾಲಿಕೆ ಸದಸ್ಯರಾದ ಮಂಜುನಾಥ್, ನರಸಿಂಹರಾಜು, ಹೋರಾಟ ಸಮಿತಿ ಸಂಚಾಲಕ ಮಂಜುನಾಥ್, ಸೋಮಶೇಖರ್, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಮೈಲಾರಪ್ಪ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News