'ನಾಯಕತ್ವ ಬದಲಾವಣೆ' ಬಗ್ಗೆ ಶಾಸಕ ಯತ್ನಾಳ್ ಹೇಳಿಕೆ: ಸ್ವಪಕ್ಷದ ಶಾಸಕನ ವಿರುದ್ಧ ಸದಾನಂದಗೌಡ ಗರಂ
ವಿಜಯಪುರ, ಡಿ. 25: 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2021ರ ಜನವರಿ 16ಕ್ಕೆ ವಿಜಯಪುರಕ್ಕೆ ಆಗಮಿಸಲಿದ್ದು, ಅಷ್ಟರೊಳಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೋ ಅಥವಾ ಬದಲಾವಣೆ ಆಗುತ್ತದೆಯೋ ಗೊತ್ತಿಲ್ಲ. ಇನ್ನು ಮತ್ತೇನಾದರೂ ಆಗಬಹುದು' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುತ್ಥಳಿ ಅನಾವರಣಗೊಳಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಸಂಭವಿಸಬಹುದು ಎಂದು ‘ನಾಯಕತ್ವ ಬದಲಾವಣೆ' ಕುರಿತು ಪರೋಕ್ಷವಾಗಿ ಭವಿಷ್ಯ ನುಡಿದರು.
ನೂತನ ವರ್ಷದಲ್ಲಿ ಬರಲಿರುವ ಸಂಕ್ರಾಂತಿ ವೇಳೆಗೆ ಉತ್ತರ ಕರ್ನಾಟಕ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ. ಮಾಧ್ಯಮ ಪ್ರತಿನಿಧಿಗಳು ಯಾವಾಗ ಯಾರನ್ನು ಹೊಗಳುತ್ತೀರೋ, ತೆಗಳುತ್ತೀರೋ ಗೊತ್ತಾಗುವುದಿಲ್ಲ. ಆದರೆ, ನಾನು ಸಚಿವನಾಗುತ್ತೇನೆ ಎಂದು ಹಾಕಬೇಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕೋರಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸೇರಿದಂತೆ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುವವರು ಮುಖ್ಯಮಂತ್ರಿ ಯಡಿಯೂರಪ್ಪನವರು ಎಂದ ಅವರು, ಏನೇ ಆದರೂ, ರಾಜ್ಯದಲ್ಲಿ ಸಂಕ್ರಮಣದ ವೇಳೆ ಮಹತ್ವದ ಬದಲಾವಣೆಗಳಾಗಲಿದೆ ಎಂದು ಭವಿಷ್ಯ ನುಡಿದರು.
ಯತ್ನಾಳ್ ಕೇವಲ ಶಾಸಕ ಅಷ್ಟೇ: ಕೇಂದ್ರ ಸಚಿವ ಸದಾನಂದಗೌಡ
ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರೇನು ಬಿಜೆಪಿ ರಾಜ್ಯಾಧ್ಯಕ್ಷರೇ? ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರೇ? ಅವರು ಕೇವಲ ವಿಜಯಪುರ ನಗರದ ಓರ್ವ ಶಾಸಕ ಅಷ್ಟೇ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಕಿಡಿಕಾರಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಲ್ಲ, ರಾಜ್ಯ ಘಟಕದ ಯಾವುದೇ ಅಧ್ಯಕ್ಷ ಸ್ಥಾನದಲ್ಲೂ ಅವರಿಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಅಷ್ಟೇ. ದಿನನಿತ್ಯ ಮಾಧ್ಯಮಕ್ಕೆ ಹಾಗೂ ಹೊರಗೆ ಮಾತನಾಡುವುದು ಅವರಿಗೆ ಶೋಭೆಯಲ್ಲ ಎಂದು ಹೇಳಿದರು.
ಯತ್ನಾಳ್ ಅವರಿಗೆ ಏನಾದರೂ ಹೇಳುವುದಿದ್ದರೆ ಪಕ್ಷದ ರಾಷ್ಟ್ರೀಯ ನಾಯಕರು ಅಥವಾ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಬೇಕು. ಅದರ ಹೊರತಾಗಿ ಬೀದಿಯಲ್ಲಿ ಮಾತನಾಡಿದರೆ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸದಾನಂದಗೌಡ ಇದೇ ವೇಳೆ ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕತ್ವದ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಶೀಘ್ರದಲ್ಲೇ ಬದಲಾವಣೆ ಆಗಲಿದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಡಿವಿಎಸ್ ಆಕ್ಷೇಪಿಸಿದರು.
'ನಮ್ಮ ಪ್ರಧಾನಿ ಮೋದಿ ತಾವು ಪ್ರಧಾನಿಯಲ್ಲ, ಸಾಮಾನ್ಯ ಸೇವಕ ಎನ್ನುವಾಗ ನಾನೂ ಪಕ್ಷದ ಸಾಮಾನ್ಯ ಕಾರ್ಯಕರ್ತನೆ. ನಾನು ಓರ್ವ ಸಾಮಾನ್ಯ ಶಾಸಕನೇ. ರಾಷ್ಟ್ರೀಯ ನಾಯಕ ಎಂದು ನಾನೆಲ್ಲೂ ಹೇಳಿಲ್ಲ. ನಾನು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದೆ. ಡಿ.ವಿ.ಸದಾನಂದಗೌಡ ಇದೀಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಯಾರು ಹಿರಿಯರು ಎಂದು ನೀವೇ ತಿಳಿದುಕೊಳ್ಳಿ. ಸದಾನಂದಗೌಡ ಹೇಳಿದ್ದು ನೂರಕ್ಕೆ ನೂರರಷ್ಟು ನಿಜ'
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ