ಕೊರೋನ ಎಫೆಕ್ಟ್: ರಾಜ್ಯದ ಪ್ರಮುಖ ದೇವಾಲಯಗಳ ಆದಾಯಕ್ಕೆ ಕತ್ತರಿ
ಬೆಂಗಳೂರು, ಡಿ.25: ಕೊರೋನ ಸೋಂಕು ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿದ ಪರಿಣಾಮ ಹಾಗೂ ಸೋಂಕಿನ ಭೀತಿಯಿಂದಾಗಿ ಜನರು ದೇವಾಲಯಗಳಿಗೆ ಆಗಮಿಸಲು ಹಿಂದೇಟು ಹಾಕಿದ ಕಾರಣದಿಂದಾಗಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಆದಾಯಕ್ಕೆ ಕತ್ತರಿ ಬಿದ್ದಿದೆ.
ರಾಜ್ಯ ಸರಕಾರದ ಅಧೀನದಲ್ಲಿರುವ ಸಂಪದ್ಭರಿತ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ 12 ದೇವಾಲಯಗಳ ಆದಾಯ ಕುಸಿದಿದೆ. 2019ರಲ್ಲಿ ಇದೇ ಸಮಯಕ್ಕೆ ಈ ದೇವಾಲಯಗಳಿಂದ ಒಟ್ಟು ಆದಾಯ 317 ಕೋಟಿ ರೂ ಸಂಗ್ರಹಿಸಿದ್ದರೆ, 2020 ರಲ್ಲಿ ಕೇವಲ 18.6 ಕೋಟಿ ಸಂಗ್ರಹವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಪ್ರತಿವರ್ಷ ಸರಾಸರಿ 90 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ, ಆದರೆ ಈ ವರ್ಷ ಕೇವಲ 4.2 ಕೋಟಿ ರೂ. ಗಳಿಸಿದೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಪ್ರತಿವರ್ಷ 45ರಿಂದ 50 ಕೋಟಿ ರೂ ಆದಾಯವಾಗುತ್ತದೆ, ಆದರೆ ಈ ವರ್ಷ ಕೇವಲ 4.5 ಕೋಟಿ ರೂ. ಆದಾಯ ಗಳಿಸಿದೆ.
ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟದ ಕಳೆದ ವರ್ಷದ ಆದಾಯ 35.23 ಕೋಟಿ ರೂ.ಗಳಾದರೆ ಈ ವರ್ಷ ಕೇವಲ 74 ಲಕ್ಷ ರೂಪಾಯಿ ಗಳಿಸಿದೆ. ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಕಳೆದ ವರ್ಷ 20.8 ಕೋಟಿ ರೂ ಆದಾಯ ಗಳಿಸಿದ್ದರೆ ಈ ವರ್ಷ 12.6 ಕೋಟಿ ರೂಪಾಯಿ ಗಳಿಸಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ 34,559 ದೇವಾಲಯಗಳಿವೆ.
ಧಕ್ಕೆಯಾಗದ ಸಿಬ್ಬಂದಿ ವೇತನ: ಮುಜರಾಯಿ ಇಲಾಖೆಯಡಿ ಬರುವ ಎ ದರ್ಜೆಯ 175 ದೇವಾಲಯಗಳು(ವರ್ಷಕ್ಕೆ 25 ಲಕ್ಷಕ್ಕೆ ಹೆಚ್ಚು ಆದಾಯ ಹೊಂದಿರುವ ದೇವಸ್ಥಾನಗಳು), 163 ಬಿ ದರ್ಜೆಯ (ವರ್ಷಕ್ಕೆ 5 ರಿಂದ 25 ಲಕ್ಷ ಆದಾಯ) ಮತ್ತು ಸಿ ದರ್ಜೆಯ(ವರ್ಷಕ್ಕೆ 5 ಲಕ್ಷಕ್ಕಿಂತ ಕಡಿಮೆ ಆದಾಯ) ಹೊಂದಿರುವ ದೇವಸ್ಥಾನಗಳು ಈ ವರ್ಷ ಕೋವಿಡ್ ಲಾಕ್ ಡೌನ್ ಆದಕಾರಣ ಹಾಕಿದ್ದ ಬಾಗಿಲು ಮತ್ತೆ ತೆರೆದಿದ್ದು, ಸೆಪ್ಟೆಂಬರ್ ನಲ್ಲಿ ದೇವಸ್ಥಾನಗಳಿಗೆ ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿಯೇ ಅಧಿಕ ಆದಾಯವಿರುತ್ತದೆ. ಹಬ್ಬ ಹರಿದಿನಗಳು ಮತ್ತು ವಿಶೇಷ ಸಮಯಗಳಲ್ಲಿಯೂ ಇರುತ್ತದೆ.
ಈ ವರ್ಷ ದೇವಾಲಯಗಳ ಆದಾಯ ಕಡಿಮೆಯಾಗಿರುವುದು ಹೌದು. ಆದರೆ ಮುಜರಾಯಿ ಇಲಾಖೆಯ ದೇವಾಲಯಗಳ ಸಿಬ್ಬಂದಿಯ ವೇತನಕ್ಕೆ ಧಕ್ಕೆಯಾಗಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಸಿಬ್ಬಂದಿಗೆ ವೇತನ ನೀಡಲು ಹಣ ಸಾಕಷ್ಟಿದ್ದು, ನಿಗದಿತ ಸಮಯಕ್ಕೆ ವೇತನ ನೀಡಲಾಗಿದೆ. ಬ್ಯಾಂಕುಗಳಿಟ್ಟ ಹಣದಿಂದ ಬಂದ ಬಡ್ಡಿಯಿಂದ ವೇತನ ನೀಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.