×
Ad

ಸಬಲೀಕರಣಗೊಂಡ ಮಹಿಳೆಯರನ್ನು ಘನತೆಯಿಂದ ನಡೆಸಿಕೊಳ್ಳುವ ಅವಶ್ಯಕತೆ ಇದೆ: ಹೈಕೋರ್ಟ್

Update: 2020-12-25 20:57 IST

ಬೆಂಗಳೂರು, ಡಿ.25: ಇಪ್ಪತ್ತೊಂದನೆಯ ಶತಮಾನದಲ್ಲೂ ಪುರುಷ ಪ್ರಧಾನ ಸಮಾಜಕ್ಕೆ ಸಬಲೀಕರಣಗೊಂಡ ಮಹಿಳೆಯನ್ನು ಯಾವ ರೀತಿಯಾಗಿ ನಡೆಸಿಕೊಳ್ಳಬೇಕು ಎಂಬುದೇ ಅರಿತಿಲ್ಲ. ಇನ್ನಾದರೂ ಸಬಲೀಕರಣಗೊಂಡ ಮಹಿಳೆಯರನ್ನು ಘನತೆಯಿಂದ ನಡೆಸಿಕೊಳ್ಳಿ ಎಂದು ಹೈಕೋರ್ಟ್ ವಿಚ್ಛೇಧನ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ.

ಶತಮಾನಗಳ ಹಿಂದಿನಿಂದಲೂ ಈ ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ಕೀಳಾಗಿಯೇ ನಡೆಸಿಕೊಂಡು ಬಂದಿದೆ. ಪುರುಷ ಪ್ರಧಾನ ವ್ಯವಸ್ಥೆ ಇತ್ತೀಚೆಗೆ ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡುತ್ತಿದೆ. ಆದರೆ, ಸಬಲೀಕರಣಗೊಂಡ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನೇ ಅರ್ಥ ಮಾಡಿಕೊಂಡಿಲ್ಲ. ಪೋಷಕರು ತಮ್ಮ ಮಕ್ಕಳಿಗೂ ಇದನ್ನು ಹೇಳಿಕೊಡುತ್ತಿಲ್ಲ. ಇದು ಪುರುಷ ಪ್ರಧಾನ ಸಮಾಜದ ಸಮಸ್ಯೆ ಎಂದು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಎರಡು ವರ್ಷಗಳ ವೈವಾಹಿಕ ಸಂಬಂಧವನ್ನು ಅಂತ್ಯಗೊಳಿಸಿಕೊಳ್ಳಲು ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಪತಿ-ಪತ್ನಿ ಇಬ್ಬರಿಗೂ ಬುದ್ಧಿವಾದ ಹೇಳಿರುವ ಪೀಠ, ಮಹಿಳೆ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲಗೊಳ್ಳುವುದು ಒಳ್ಳೆಯದು. ಆದರೆ, ಇದೇ ವೈವಾಹಿಕ ಜೀವನಕ್ಕೆ ಮುಳುವಾಗಬಾರದು. ಶಿಕ್ಷಿತ ಮಹಿಳೆ ತನ್ನ ಕುಟುಂಬದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನೂ ಅರಿತುಕೊಳ್ಳಬೇಕು. ಹಾಗೆಯೇ ಮನೆಗೆ ಸೊಸೆ ಬಂದ ಕೂಡಲೇ ಅತ್ತೆ ಎನ್ನಿಸಿಕೊಂಡವರು ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು ಎಂದಿದೆ.

ಮನೆಯಲ್ಲಿ ಒಬ್ಬಳೇ ಮಗಳಾಗಿ ಬೆಳೆದಿದ್ದರಿಂದ ಸಂಗಾತಿ ಕುಟುಂಬದೊಂದಿಗೆ ಹೊಂದಾಣಿಕೆ ಕಷ್ಟವಾಗುತ್ತಿದೆ ಎಂಬ ಪತ್ನಿಯ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಪೀಠ, ಒಬ್ಬಳೇ ಮಗಳಾಗಿ ಬೆಳೆದಿದ್ದೀನಿ ಎಂಬ ಮಾತ್ರಕ್ಕೆ ಗಂಡನನ್ನು ಆತನ ಕುಟುಂಬವನ್ನೂ ನಿರ್ಲಕ್ಷಿಸಬಹುದು ಎಂದು ಭಾವಿಸಬಾರದು. ಮದುವೆ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಒಂದು ಅತ್ಯುತ್ತಮ ಹೊಂದಾಣಿಕೆ. ಹೀಗಾಗಿ ಸಮಾಲೋಚನೆಗೆ ಹೋಗಿ. ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ವಿಚ್ಛೇದನ ಕೋರಿರುವ ದಂಪತಿಗೆ ತಿಳಿಹೇಳಿ, ವಿಚಾರಣೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News