ಕನ್ನಡ ವಿವಿ ಉಳಿಸಿ ಅಭಿಯಾನಕ್ಕೆ ಹೋರಾಟಗಾರರು, ಚಿತ್ರ ನಿರ್ದೇಶಕರ ಬೆಂಬಲ
ಬೆಂಗಳೂರು, ಡಿ.25: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಸೇರಿದಂತೆ ವಿವಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ‘ಭಿತ್ತಿ ಪತ್ರ’ ಚಳವಳಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ರಾಜ್ಯದ ಹಲವು ಮಠಾಧೀಶರು ಹಾಗೂ ಹೋರಾಟಗಾರರು, ಚಿತ್ರ ನಿರ್ದೇಶಕರು ಬೆಂಬಲ ಸೂಚಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರು ಡಂಬಳ ಗದಗದ ಪೀಠಾಧ್ಯಕ್ಷ ತೋಂಟದ ಸಿದ್ಧರಾಮ ಸ್ವಾಮೀಜಿ, ಚಿಂಚಣಿ ಸಿದ್ಧಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮಿ, ಕೂಡಲಸಂಗಮದ ಪಂಚಮಸಾಲಿ ಲಿಂಗಾಯಿತ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬೆಳಗಾವಿಯ ಹುಕ್ಕೇರಿ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮಿ ಸೇರಿದಂತೆ ಮತ್ತಿತರರು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಂಪಿಯ ಕನ್ನಡ ವಿವಿಯು ಹಲವು ಸಂಶೋಧನೆಗಳಿಗೆ ತೆರೆದ ಬಾಗಿಲಾಗಿದೆ. ಹಲವು ವಿದ್ವಾಂಸರನ್ನು ಸೃಷ್ಟಿಸಿದ ಶೈಕ್ಷಣಿಕ ಸಂಸ್ಥೆಯಾಗಿದೆ. ಅದಕ್ಕೆ ಅನುದಾನ ಕೊರತೆ ಎದುರಾಗಿದ್ದು, ವಿಷಾದನೀಯ. ಬೇರೆ ಬೇರೆ ಉದ್ದೇಶಕ್ಕೆ ಸರಕಾರದ ಬಳಿ ಹಣವಿದೆ, ವಿವಿಗೆ ನೀಡಲು ಹಣವಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ನಾಡು, ನುಡಿ ಸಂರಕ್ಷಣೆಗಾಗಿ ಇರುವ ಸ್ವಾಯತ್ತ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ ಚುನಾಯಿತ ಸರಕಾರದ್ದಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ, ಸ್ಥಾನಮಾನ, ಗೌರವವನ್ನು ನೀಡಬೇಕಿದೆ. ಕೂಡಲೇ ಸರಕಾರವು ವಿವಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ವೈ.ಎಸ್.ವಿ.ದತ್ತ, ಚಲನಚಿತ್ರ ನಿರ್ದೇಶಕರಾದ ಜಯತೀರ್ಥ ಹಾಗೂ ಎನ್.ಎಸ್.ಶಂಕರ್, ಕನ್ನಡದ ಸಂಸ್ಕೃತಿ, ಇತಿಹಾಸ, ಪರಂಪರೆ, ಸಾಹಿತ್ಯ ಇವುಗಳನ್ನು ಉಳಿಸಿ ಬೆಳೆಸುವ ಪ್ರಾತಿನಿಧಿಕ ಸಂಸ್ಥೆ. ನಮ್ಮ ಅಸ್ಮಿತೆಯ ಪ್ರತೀಕ. ಇಂತಹ ಸಂಸ್ಥೆಗೆ ಸರಕಾರ ಅನುದಾನ ನೀಡುವುದಕ್ಕೆ ಹಿಂದೆ-ಮುಂದೆ ನೋಡುವುದು ಸಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ತಡೆ ಹಿಡಿದರೆ, ಪೋಷಿಸದಿದ್ದಲ್ಲಿ ಕ್ರಮೇಣ ನಶಿಸಲು ಸರಕಾರಗಳು ಕಾರಣವಾಗುತ್ತವೆ. ಹೀಗಾಗಿ, ಅದಕ್ಕೆ ಅನುದಾನ ನೀಡಿ ಎಂದು ಒತ್ತಾಯಿಸಿದ್ದಾರೆ.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್ ಪ್ರಸಾದ್, ಹೋರಾಟಗಾರ ಡಾ ವಡ್ಡಗೆರೆ ನಾಗರಾಜಯ್ಯ, ಅಲೆಮಾರಿ ಬುಡಕಟ್ಟು ಮಹಾಸಭಾದ ಕಾರ್ಯಾಧ್ಯಕ್ಷ ವೆಂಕಟರಮಣಯ್ಯ ಸೇರಿದಂತೆ ಮತ್ತಿತರರು ಬೆಂಬಲ ವ್ಯಕ್ತಪಡಿಸಿದ್ದು, ಮರಾಠ ಅಭಿವೃದ್ಧಿ ನಿಗಮಕ್ಕೆ ಹಣ ಇದೆ, ಕನ್ನಡ ವಿವಿಗೆ ಇಲ್ಲ. ತೆಲುಗು, ತಮಿಳು ಅಭಿವೃದ್ಧಿ ನಿಗಮವನ್ನೂ ಮಾಡುತ್ತೇವೆ ಎನ್ನುವ ಸರಕಾರದ ಬಳಿ ಕನ್ನಡ ವಿವಿಗೆ ನೀಡಲು ಹಣ ಇಲ್ಲ. ಇದು ಇವತ್ತಿನ ಸರಕಾರದ ಮನಸ್ಥಿತಿ ಮತ್ತು ಕನ್ನಡ ನಾಡಿನ ಪರಿಸ್ಥಿತಿ ಎಂದು ವ್ಯಂಗ್ಯವಾಡಿದ್ದು, ಸರಕಾರವು ಈ ಕೂಡಲೇ ನಮ್ಮ ಕನ್ನಡದ ಏಕೈಕ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕೂಡಲೇ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.