×
Ad

ವರ್ತೂರು ಕೋಡಿ ವೃತ್ತಕ್ಕೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು ಪ್ರಸ್ತಾವನೆ ತಿರಸ್ಕರಿಸಿದ ಸರಕಾರ

Update: 2020-12-25 21:12 IST

ಬೆಂಗಳೂರು, ಡಿ.25: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರನ್ನು ನಗರದ ವರ್ತೂರು ಕೋಡಿ ವೃತ್ತಕ್ಕೆ ನಾಮಕರಣ ಮಾಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಅನುಮೋದನೆಗಾಗಿ ಕಳುಹಿಸಲಾಗಿದ್ದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ.

ಬೆಂಗಳೂರು ನಗರದ ಹಗದೂರು ವ್ಯಾಪ್ತಿಯ ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲು 2020ರ ಮಾ.7ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು, ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿರುವ ಸರಕಾರ ಮಧುಕರ್ ಶೆಟ್ಟಿ ಅವರ ಹೆಸರನ್ನು ವರ್ತೂರು ಕೋಡಿ ವೃತ್ತಕ್ಕೆ ನಾಮಕರಣ ಮಾಡಲು ನಿರಾಕರಿಸಿ ತಿರಸ್ಕರಿಸಿದೆ. ಈ ವಿಷಯವನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.15ರಂದು ಬಿಬಿಎಂಪಿ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸ್ತಾವನೆಯನ್ನು ಯಾಕೆ ತಿರಸ್ಕರಿಸಲಾಗಿದೆ ಎಂಬ ಬಗ್ಗೆ ಸರಕಾರ ಯಾವುದೇ ಸ್ಪಷ್ಟ ಕಾರಣವನ್ನೂ ನೀಡಿಲ್ಲ. ಸರಕಾರದ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೊಳಗಾಗಿದೆ. ಮಧುಕರ್ ಶೆಟ್ಟಿ ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಉತ್ತಮ ಹೆಸರು ಪಡೆದಿದ್ದರು. ಜತೆಗೆ ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆಯು ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು.

ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಮಧುಕರ್ ಶೆಟ್ಟಿ, ವಾಪಸ್ ಮರಳಿದ ಬಳಿಕ ಕೆಲ ಕಾಲ ಸಿಐಡಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಹೈದರಾಬಾದ್‍ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಪೊಲೀಸ್ ಅಕಾಡಮಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಅನಾರೋಗ್ಯದಿಂದ ಅಕಾಲಿಕ ನಿಧನರಾಗಿದ್ದರು. ಮಧುಕರ್ ಶೆಟ್ಟಿ ಅವರ ದಕ್ಷತೆ, ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ವೃತ್ತಕ್ಕೆ ಹೆಸರಿಡಲು ಯೋಚಿಸಲಾಗಿತ್ತು.

ಸರಕಾರ ವಿರುದ್ಧ ಜನರ ಆಕ್ರೋಶ

ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ದಾಖಲಾಗಿದ್ದ ಡಿನೋಟಿಫಿಕೇಷನ್ ಪ್ರಕರಣದ ತನಿಖೆಯನ್ನು ಮಧುಕರ್ ಶೆಟ್ಟಿ ಕೂಡ ನಡೆಸಿ ಬಿಎಸ್‍ವೈ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ವೃತ್ತಕ್ಕೆ ಇರಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿ ದ್ವೇಷ ಸಾಧನೆಗೆ ಮುಂದಾಗಿಬಹುದು ಎಂಬ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಹಲವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳನ್ನೇ ಬಂಧಿಸಿದ್ದರು  

ಚಿಕ್ಕಮಗಳೂರು, ಚಾಮರಾಜನಗರ ಸೇರಿ ಹಲವು ಕಡೆಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಹೆಸರು ಪಡೆದಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರು ಶಾಸಕರ ಭವನದಲ್ಲಿ ಲಂಚ ಪಡೆಯುವ ವೇಳೆ ದಾಳಿ ನಡೆಸಿ ಬಂಧಿಸಿದ್ದರು. ಬಿಬಿಎಂಪಿ ಸದಸ್ಯ ಗೋವಿಂದರಾಜು ಬಂಧನ, ಬಳ್ಳಾರಿ ಗಣಿಗಾರಿಕೆ ಕುರಿತು ತನಿಖೆ, ಕೆಐಎಡಿಬಿ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News