×
Ad

ವಿಶ್ವವಿದ್ಯಾಲಯಗಳ ಮೇಲೆ ಕೋವಿಡ್ ಕರಿಛಾಯೆ: ಸರಕಾರದ ಅನುದಾನ ಕಡಿತದಿಂದ ಆರ್ಥಿಕ ಸಂಕಷ್ಟ

Update: 2020-12-25 22:02 IST

ಬೆಂಗಳೂರು, ಡಿ.25: ಕೋವಿಡ್ ಪರಿಣಾಮವು ರಾಜ್ಯದ ವಿಶ್ವವಿದ್ಯಾಲಯಗಳ ಮೇಲೂ ಬೀರಿದ್ದು, ಸರಕಾರದಿಂದ ಸಿಗುವಂತಹ ಅನುದಾನದಲ್ಲಿ ಕಡಿತಗೊಂಡಿದೆ. ವಿವಿಗಳೀಗ ಶೇ.30 ರಿಂದ 40 ರಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಅಂದಾಜಿಸಲಾಗಿದೆ.

ಕೊರೋನ ಹೊಡೆತ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೇಲಷ್ಟೇ ಪ್ರಭಾವ ಬೀರಿಲ್ಲ. ವಿಶ್ವವಿದ್ಯಾಲಯಗಳ ಆಡಳಿತದ ಮೇಲೂ ಪರಿಣಾಮ ಬೀರಿದೆ. ರಾಜ್ಯದ ಪ್ರಮುಖ ವಿವಿಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಕುವೆಂಪು, ಧಾರವಾಡ, ದಾವಣಗೆರೆ, ಮಹಿಳಾ ವಿವಿ, ಸಂಸ್ಕೃತ ವಿವಿ ಸೇರಿದಂತೆ ಎಲ್ಲ ವಿವಿಗಳಿಗೂ ಅನುದಾನದ ಕೊರತೆ ಎದುರಾಗಿದೆ.

ಪ್ರತಿ ವರ್ಷ ಸರಕಾರ ಬಜೆಟ್‍ನಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದ ವೇತನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತದೆ. ಆದರೆ ಕೊರೋನದಿಂದಾಗಿ ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ವಿವಿಗೆ ವೇತನಾನುದಾನ ಹೊರತುಪಡಿಸಿ, ಬೇರೆ ಕೆಲವು ವಿಭಾಗಕ್ಕೆ ನೀಡಬೇಕಿರುವ ಅನುದಾನ ಇನ್ನೂ ಮಂಜೂರಾಗಿಲ್ಲ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ ನೀಡಬೇಕಿರುವ ಅನುದಾನದಲ್ಲೂ ಕಡಿತ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಂದ ಪ್ರತಿವರ್ಷವೂ ವಿಶ್ವವಿದ್ಯಾಲಯಗಳು ದಾಖಲಾತಿ ಶುಲ್ಕ, ಕಾಲೇಜುಗಳ ಮಾನ್ಯತೆ ಶುಲ್ಕ, ಪರೀಕ್ಷಾ ಶುಲ್ಕ, ಹಾಸ್ಟೆಲ್‍ಗಳ ಶುಲ್ಕ, ಸ್ನಾತಕೋತ್ತರ ಕೇಂದ್ರಗಳಲ್ಲಿ ಹಲವು ರೀತಿಯ ಶುಲ್ಕಗಳು, ಸಂಶೋಧನಾಧ್ಯಯನ ಶುಲ್ಕ ಸೇರಿದಂತೆ ಹಲವು ರೀತಿಯಲ್ಲಿ ಶುಲ್ಕಗಳಿಂದ ಹಣ ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಕೊರೋನ ಕಾರಣದಿಂದಾಗಿ ಕಾಲೇಜು ಆರಂಭವಾಗಿಲ್ಲ. ಆದುದರಿಂದಾಗಿ, ಎಲ್ಲವೂ ಆನ್‍ಲೈನ್ ಮೂಲಕ ನಡೆದಿವೆ. ವಿಶ್ವವಿದ್ಯಾಲಯಗಳು ಆನ್‍ಲೈನ್ ತರಗತಿಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಕಾಲೇಜುಗಳ ಮಾನ್ಯತೆ, ಮಾನ್ಯತೆ ನವೀಕರಣದ ಶುಲ್ಕ ಪಾವತಿಸಲು ಈಗಷ್ಟೇ ಆರಂಭವಾಗಿದೆ. ಅಲ್ಲದೆ, 10 ತಿಂಗಳುಗಳಿಂದ ಹಾಸ್ಟೆಲ್‍ಗಳು ಮುಚ್ಚಿರುವುದರಿಂದ ಅದರ ಶುಲ್ಕವೂ ಬಂದಿಲ್ಲ ಎಂದು ಕುಲಪತಿಯೊಬ್ಬರು ಹೇಳಿದ್ದಾರೆ.

ಕೊರೋನ ಕಾರಣದಿಂದಾಗಿ ದಾಖಲಾತಿ, ಪರೀಕ್ಷಾ ಶುಲ್ಕ ಹಾಗೂ ಇತರ ಕೆಲವು ಮೂಲಗಳಿಂದ ವಿವಿಗೆ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಹೀಗಾಗಿ ಆರ್ಥಿಕವಾಗಿ ಸ್ವಲ್ಪ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಹೇಳಿದ್ದಾರೆ.

ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಯಾವುದೇ ರೀತಿಯ ಆರ್ಥಿಕ ಹಿನ್ನಡೆಯಾಗಿಲ್ಲ. ದಾಖಲಾತಿ ಹಾಗೂ ಇತರೆ ಪ್ರಕ್ರಿಯೆಗಳು ಎಂದಿನಂತೆಯೇ ನಡೆಯುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News