ಪಟ್ಟಭದ್ರ ಹಿತಾಸಕ್ತಿಗಳಿಂದ ನನ್ನ ತೇಜೋವಧೆಗೆ ಯತ್ನ: ಆರ್.ಅಬ್ದುಲ್ ರಿಯಾಝ್ ಖಾನ್

Update: 2020-12-25 17:11 GMT

ಬೆಂಗಳೂರು, ಡಿ.25: ರಾಜ್ಯ ವಕ್ಫ್ ಬೋರ್ಡ್‍ನಲ್ಲಿ ಸುಮಾರು 15 ವರ್ಷಗಳ ಕಾಲ ನನ್ನಿಂದ ಸಾಧ್ಯವಾದಷ್ಟು ಸೇವೆಯನ್ನು ಸಲ್ಲಿಸಿದ್ದೇನೆ. ಇದೀಗ, ಪುನಃ ಬಾರ್ ಕೌನ್ಸಿಲ್‍ನ ಮಾಜಿ ಸದಸ್ಯರ ವಿಭಾಗದಡಿಯಲ್ಲಿ ವಕ್ಫ್ ಬೋರ್ಡ್‍ಗೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ನನ್ನ ತೇಜೋವಧೆಗೆ ನಿರಂತರ ಪ್ರಯತ್ನ ಪಡುತ್ತಿವೆ ಎಂದು ಆರ್.ಅಬ್ದುಲ್ ರಿಯಾಝ್ ಖಾನ್ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2019ರಲ್ಲಿ ರಾಜ್ಯ ವಕ್ಫ್ ಬೋರ್ಡ್‍ಗೆ ಚುನಾವಣೆ ನಡೆಸಲು ಸರಕಾರ ಮುಂದಾದಾಗ ಸಂಸದರ ವಿಭಾಗದಿಂದ ಒಬ್ಬರು, ಶಾಸನ ಸಭೆಯಿಂದ ಇಬ್ಬರು, ಬಾರ್ ಕೌನ್ಸಿಲ್‍ನಿಂದ ಇಬ್ಬರು ಹಾಗೂ ಮುತವಲ್ಲಿ ವಿಭಾಗದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು ಎಂದರು.

ಆದರೆ, ನಂತರ ಬಾರ್ ಕೌನ್ಸಿಲ್‍ನಿಂದ ಕೇವಲ ಒಬ್ಬ ಸದಸ್ಯರನ್ನು ಮಾತ್ರ ಆಯ್ಕೆ ಮಾಡಬೇಕು ಎಂದು ತನ್ನ ಆದೇಶವನ್ನು ಸರಕಾರ ಪರಿಷ್ಕರಿಸಿತ್ತು. ಇದನ್ನು ಪ್ರಶ್ನಿಸಿ ನಾನು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣೆಯ ಹಂತದಲ್ಲಿದೆ. ವಕ್ಫ್ ಬೋರ್ಡ್‍ನ ಹಾಲಿ ಅಧ್ಯಕ್ಷರಾಗಿದ್ದ ಮುಹಮ್ಮದ್ ಯೂಸುಫ್ ಅಕಾಲಿಕ ನಿಧನದ ಬಳಿಕ ವಕ್ಫ್ ಬೋರ್ಡ್ ಅನ್ನು ಪುನರ್ ರಚನೆ ಮಾಡಲು ಮುಂದಾದ ಸರಕಾರ, ಈ ಹಿಂದೆ ಸೂಚಿಸಿದಂತೆ ಬಾರ್ ಕೌನ್ಸಿಲ್‍ನ ಮಾಜಿ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿ ಅವಕಾಶ ನೀಡಿತು. ಅದರಂತೆ, ನಾನು ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಪ್ರಸಕ್ತ ಸಾಲಿನ ಡಿ.17ರಂದು ನನ್ನ ಸದಸ್ಯತ್ವದ ಗೆಜೆಟ್ ನೋಟಿಫಿಕೇಷನ್ ಆಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ಅಣ್ಣೀಪುರ ಗ್ರಾಮದ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಸಂಬಂಧ ನನ್ನ ವಿರುದ್ಧ ಎಫ್‍ಐಆರ್ ಹಾಕಲಾಗಿತ್ತು. ಆದರೆ, 2013ರ ಸೆಪ್ಟಂಬರ್ 25ರಂದು ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣ ಹಿಂಪಡೆಯಲಾಗಿದ್ದು, ನನ್ನ ವಿರುದ್ಧದ ಆರೋಪಗಳಲ್ಲಿ ಯಾವುದೆ ಸತ್ಯಾಂಶವಿಲ್ಲ ಎಂದು ನ್ಯಾಯಾಲಯಕ್ಕೆ ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ, ಸತ್ಯಾಂಶವನ್ನು ಮರೆ ಮಾಚಿ ನಿರಂತರವಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ರಿಯಾಝ್ ಖಾನ್ ತಿಳಿಸಿದರು.

ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗಲೂ ಇದೇ ರೀತಿಯ ಅಪಪ್ರಚಾರವನ್ನು ನಡೆಸಲಾಗಿತ್ತು. ನಾನು ವಕ್ಫ್ ಬೋರ್ಡ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ವಾರ್ಷಿಕ ಕನಿಷ್ಠ ಒಂದು ಕೋಟಿ ರೂ. ಗಳ ಆದಾಯ ಬರುವಂತಹ ಸುಮಾರು ಒಂದು ಸಾವಿರ ಆಸ್ತಿಗಳನ್ನು ಗುರುತಿಸಿದ್ದೆ. ಈಗ ಮತ್ತೊಮ್ಮೆ ವಕ್ಫ್ ಬೋರ್ಡ್‍ನಲ್ಲಿ ಕೆಲಸ ಮಾಡಲು ಅವಕಾಶವಿದೆ. ಎಲ್ಲ ಸದಸ್ಯರು ಸೇರಿ ಒಂದು ತಂಡವಾಗಿ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News