ಕಾಡಾನೆ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ: ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ
Update: 2020-12-25 23:13 IST
ಮಡಿಕೇರಿ ಡಿ.25: ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ನಾಗರಹೊಳೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಜಿ.ಗುರುರಾಜ್ (50) ಎಂಬುವವರೇ ಮೃತಪಟ್ಟವರು.
ನಾಗರಹೊಳೆ ದೊಡ್ಡಹಳ್ಳ ಮುಖ್ಯ ರಸ್ತೆಯಿಂದ 200 ಮೀಟರ್ ಅಂತರದಲ್ಲಿ ಬೀಟ್‍ಗೆ ತೆರಳಿದ ಸಂದರ್ಭ ಕಾಡಾನೆ ದಾಳಿ ಮಾಡಿದೆ. ಸ್ಥಳದಲ್ಲಿದ್ದ ವಾಚರ್ ಚಂದ್ರ ಹಾಗೂ ಅಶೋಕ್ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಗುರುರಾಜ್ ತಪ್ಪಿಸಿಕೊಳ್ಳಲಾಗದೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ದಾಳಿಯಾದ ತಕ್ಷಣ ಕುಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಗುರುರಾಜ್ ಮೃತಪಟ್ಟಿದ್ದಾರೆ.
ನಾಗರಹೊಳೆ ಡಿಸಿಎಫ್ ಮಹೇಶ್ ಕುಮಾರ್, ಎ.ಸಿ.ಎಫ್ ಗೋಪಾಲ್, ಆರ್ ಎಫ್ ಒ ಅಮಿತ್ ಗೌಡ, ಕುಟ್ಟ ವೃತ್ತ ನಿರೀಕ್ಷಕ ಪರಮಶಿವಮೂರ್ತಿ, ಉಪನಿರೀಕ್ಷಕ ಚಂದ್ರಪ್ಪ ಹಾಜರಿದ್ದರು.