ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಸಚಿವ ಈಶ್ವರಪ್ಪ ಗರಂ

Update: 2020-12-26 12:51 GMT

ಶಿವಮೊಗ್ಗ,ಡಿ.26: ಸಂಕ್ರಾತಿಯ ನಂತರ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ರಾಜ್ಯ ನಾಯಕರು ಗಮನಿಸುತ್ತಿದ್ದಾರೆ. ನಾನು ಕೂಡ ಈ ಹಿಂದೆ ಅವರನ್ನು ಕರೆಯಿಸಿ, ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಯನ್ನು ನೀಡದಂತೆ ಖಾರವಾಗಿಯೇ ಹೇಳಿದ್ದೆ. ಆಗ ಅವರು ಒಪ್ಪಿಕೊಂಡಿದ್ದರು. ಈಗ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸವನಗೌಡ ಪಾಟೀಲ್ ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತ. ಅವರು ಯಾಕೆ ಈ ರೀತಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಅವರನ್ನು ಕರೆದು ಖಂಡಿತಾ ಮಾತನಾಡುತ್ತೇವೆ. ಯಾವುದೇ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸಬೇಕು. ಪಕ್ಷವೂ ಗಂಭೀರವಾಗಿ ಪರಿಗಣಿಸುವಂತಿರಬೇಕು. ಅವರೊಬ್ಬ ಕಠೋರ ಹಿಂದುತ್ವವಾದಿ. ಆದರೂ ಗೊಂದಲದ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿವೆ ಎಂದು ಈಶ್ವರಪ್ಪ ಹೇಳಿದರು.

ಇನ್ನು ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯ ರೈತ ಹೋರಾಟ ರಾಜಕೀಯವಾದ ಒಂದು ಷಡ್ಯಂತ್ರ. ಇದು ಕಾಂಗ್ರೆಸ್ ಪ್ರೇರಿತ ರೈತ ಹೋರಾಟ ಎಂದು ಹೇಳಿದರು.

ಈ ದೇಶದ ರೈತರು ಅವರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಯಾರಪ್ಪನ ಅಪ್ಪಣೆ ಬೇಕು. ರೈತ ಬೆಳೆದ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಲಿ. ದಲ್ಲಾಳಿಗಳು ಯಾಕೆ ಬೇಕು. ರಾಜ್ಯದ ಮತ್ತು ದೇಶದ ರೈತರು ಈ ಕಾಯ್ದೆಯನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದಾರೆ. ಕುತಂತ್ರ ರಾಜಕಾರಣಿಗಳಿಂದ ರೈತರನ್ನು ಎತ್ತಿಕಟ್ಟುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News