ಹೊಸ ಪ್ರಭೇದದ ಕೊರೋನ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2020-12-26 12:16 GMT

ಬೆಂಗಳೂರು, ಡಿ.26: ಹೊಸ ಪ್ರಭೇದದ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ರೂಪಿಸಬೇಕಿದೆ. ಇದಕ್ಕಾಗಿ ಗೃಹ ಇಲಾಖೆಯ ಜೊತೆ ಸಭೆ ನಡೆಸಿ ಹೊಸ ಬಗೆಯ ಪ್ರಭೇದದ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಈ ಲಸಿಕೆಯನ್ನು ಪ್ರಾಯೋಗಿಕವಾಗಿ ಪಡೆಯಬಹುದು. ಕೊರೋನ ವಾರಿಯರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಈ ಲಸಿಕೆಯನ್ನು ಪಡೆದು ಪ್ರಯೋಗದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದೇನೆ. ಕ್ಲಿನಿಕಲ್ ಟ್ರಯಲ್‍ನಲ್ಲಿ ಪಾಲ್ಗೊಂಡು ಸಹಾಯ ಮಾಡಬಹುದು ಎಂದು ಅವರು ಇದೇ ವೇಳೆ ತಿಳಿಸಿದರು.

ವಿದೇಶಗಳಿಂದ ಬಂದವರ ಪರೀಕ್ಷೆ: ಯು.ಕೆ.ಯಿಂದ ಬಂದ 2,500 ಜನ ಪೈಕಿ, 1,638 ಜನರಿಗೆ ಕೊರೋನ ಸೋಂಕು ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 14 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇವರ ಮಾದರಿಯನ್ನು ನಿಮ್ಹಾನ್ಸ್ ನ ಲ್ಯಾಬ್‍ಗೆ ಕಳುಹಿಸಲಾಗಿದೆ. ಈ ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಇದಕ್ಕೆ 48 ಗಂಟೆಗಳ ಕಾಲ ಬೇಕಾಗುತ್ತದೆ. ವರದಿ ಬಂದ ಬಳಿಕ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಲಾಗುವುದು. ಇಡೀ ದೇಶದಲ್ಲಿ ಯು.ಕೆ.ಯಿಂದ ಒಟ್ಟು 38,500 ಜನರು ಬಂದಿದ್ದಾರೆ. ಎಲ್ಲ ರಾಜ್ಯಗಳಿಂದ ಬಂದ ಮಾದರಿ, ವರದಿಯನ್ನು ಕಲೆಹಾಕಿ ಅಂತಿಮ ವರದಿಯನ್ನು ಐಸಿಎಂಆರ್ ಪ್ರಕಟಿಸಲಿದೆ ಎಂದು ಡಾ.ಸುಧಾಕರ್ ಸ್ಪಷ್ಟಣೆ ನೀಡಿದರು.

ನಗರದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಸೂಕ್ತ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೋನ ನೆಗೆಟಿವ್ ವರದಿ ಇಲ್ಲದವರನ್ನೂ ವಿಮಾನ ನಿಲ್ದಾಣದಲ್ಲೇ ಕೊರೋನ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದ ಅವರು, ಹೊರಗಿನಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ಸರಕಾರ ಸೂಕ್ತ ನಿಗಾ ವಹಿಸಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News