ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿ ಪೋಷಿಸುತ್ತಿದೆ: ಡಾ.ಕೆ.ಪಿ.ಅಂಶುಮಂತ್ ಆರೋಪ

Update: 2020-12-26 13:10 GMT

ಚಿಕ್ಕಮಗಳೂರು, ಡಿ.26: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದೆ. ಆದರೆ ಮಲೆನಾಡಿನ ಜನರ ಬದುಕಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿ ತಡೆಯುವ ಸಂಬಂಧ ಬಿಜೆಪಿ ಸರಕಾರಗಳು ಯಾವುದೇ ಕ್ರಮವಹಿಸಿಲ್ಲ. ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ವರದಿ ಸಂಬಂಧ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಕಸ್ತೂರಿರಂಗನ್ ವರದಿಯನ್ನು ಬಿಜೆಪಿ ಪೋಷಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿ ಜಿಲ್ಲೆಯ ಮಲೆನಾಡು ಭಾಗದ ಜನರನ್ನು ಕಂಗೆಡುವಂತೆ ಮಾಡಿದೆ. ವರದಿ ವ್ಯಾಪ್ತಿಯಲ್ಲಿ ಬರುವ 147 ಗ್ರಾಮಗಳ ಜನರು ವರದಿ ಜಾರಿಯಿಂದಾಗಿ ಬದುಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಆತಂಕದಿಂದ ಪಾರಾಗಲು ಜನರು 15 ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕರಿಸಿ ಸರಕಾರದ ಮೇಲೆ ಸಮಸ್ಯೆ ಪರಿಹರಿಸಲು ಒತ್ತಡ ಹೇರಿದ್ದಾರೆ. ಯೋಜನೆ ವಿರೋಧಿಸಿ ಹಳ್ಳಿಹಳ್ಳಿಗಳಲ್ಲೂ ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಈ ಯೋಜನೆಗೂ ತನಗೂ ಸಂಬಂಧವೇ ಇಲ್ಲ ಎಂಬಂತಹ ನಿಲುವು ಪ್ರದರ್ಶಿಸುತ್ತಿದೆ. ಜನರ ಆತಂಕವನ್ನು ಸರಕಾರಕ್ಕೆ ಮನವರಿಕೆ ಮಾಡಬೇಕಾದ ಶಾಸಕರು, ಸಂಸದರು ಸ್ವಹಿತಾಸಕ್ತಿಯ ರಾಜಕಾರಣಲ್ಲಿ ಮುಳುಗಿದ್ದಾರೆಂದು ಆರೋಪಿಸಿದರು.

ಕಾಫಿ ಉದ್ಯಮ, ಅಡಿಕೆ ಕೃಷಿಗೆ ಹೆಸರಾಗಿರುವ ಚಿಕ್ಕಮಗಳೂರು ಜಿಲ್ಲೆ ಪ್ರಾಕೃತಿಕ ಸೌಂದರ್ಯಕ್ಕೂ ಹೆಸರಾಗಿದೆ. ಕಾಫಿ, ಅಡಿಕೆ ಕೃಷಿಯೊಂದಿಗೆ ಇಲ್ಲಿನ ರೈತರು, ಬೆಳೆಗಾರರು, ಕಾರ್ಮಿಕರು ಅನ್ಯೋನತೆಯಿಂದ ಬದುಕುಕಟ್ಟಿಕೊಂಡಿದ್ದಾರೆ. ಪ್ರಕೃತಿ ಸೌಂದರ್ಯದ ಲಾಭದಿಂದಾಗಿ ಸಾವಿರಾರು ಜನರು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಆದರೆ ಸದ್ಯ ಸರಕಾರದ ಅವೈಜ್ಞಾನಿಕ ಅರಣ್ಯ ಯೋಜನೆಗಳಿಂದಾಗಿ ಮಲೆನಾಡಿನ ಜನರು ಸದಾ ಆತಂಕದಲ್ಲಿ ಬದುಕುವಂತಾಗಿದೆ. ರಾಜ್ಯದ ಅತ್ಯಂತ ಎತ್ತರದ ಗಿರಿಶ್ರೇಣಿಯಾಗಿರುವ ಮುಳ್ಳಯ್ಯನಗಿರಿ ವ್ಯಾಪ್ತಿಯಲ್ಲಿ ನೂರಾರು ಜನವಸತಿ ಇರುವ ಗ್ರಾಮಗಳಿದ್ದು, ಅರಣ್ಯ ಇಲಾಖೆ ಈ ಭಾಗದಲ್ಲಿ ಪರಿಸರ ಸೂಕ್ಷ್ಮ ವಲಯ ಯೋಜನೆ ಘೋಷಿಸಲು ಸಿದ್ಧತೆ ನಡೆಸಿದೆ. ಪರಿಣಾಮ ಗಿರಿ ವ್ಯಾಪ್ತಿಯ ಜನರು ಒಕ್ಕಲೇಳಬೇಕಾದ ಭೀತಿಯಲ್ಲಿದ್ದಾರೆ. 
ಜಿಲ್ಲೆಯಲ್ಲಿರುವ ಭದ್ರಾ ಹುಲಿ ಸಂರಕ್ಷಣಾ ವಲಯ ಯೋಜನೆ ವ್ಯಾಪ್ತಿಗೆ ಹೆಚ್ಚುವರಿ ಭೂಮಿ ಸೇರಿಸುವ ಪ್ರಸ್ತಾವವೂ ಸರಕಾರದ ಮುಂದಿದ್ದು, ಈ ಯೋಜನೆಯಿಂದಲೂ ಮೆಲನಾಡು ಭಾಗದ ಜನರು ಆತಂಕದಲ್ಲಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೂ ಕೋರ್ ಝೋನ್ ವಿಸ್ತರಣೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಉದ್ಯಾನವನದ ಗಡಿ ಭಾಗದ ಗ್ರಾಮಗಳ ಜನರು ಒಕ್ಕಲೇಳಬೇಕಾದ ಸ್ಥಿತಿಯಲ್ಲಿದ್ದಾರೆ. ಅರಣ್ಯ ಕಾಯ್ದೆಯಡಿಯಲ್ಲಿ ಸೆಕ್ಷನ್ 4 ಅಧಿಸೂಚನೆಯೂ ಮಲೆನಾಡಿನ ಜನರ ನಿದ್ದೆಗೆಡಿಸಿದ್ದು, ಮಲೆನಾಡಿನ ಜನರ ಬದುಕಿಗೆ ಮಾರಕವಾಗಿರುವ ಈ ಎಲ್ಲ ಯೋಜನೆಗಳನ್ನು ರಾಜ್ಯ ಸರಕಾರ ರದ್ದುಪಡಿಸಬೇಕೆಂದು ಅಂಶುಮಂತ್ ಒತ್ತಾಯಿಸಿದರು.

ಜಿಲ್ಲೆಯ ಕಳಸ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಹಿಂದಿನ ಸರಕಾರ ಘೋಷಣೆ ಮಾಡಿದ್ದು, ಹಾಲಿ ಬಿಜೆಪಿ ಸರಕಾರ ಈ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಮುಂದಾಗಿಲ್ಲ. ಕಳಸ ತಾಲೂಕು ಕೇಂದ್ರದ ಅನುಷ್ಠಾನ ಮಾಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು. ಜಿಲ್ಲೆಯನ್ನು ಪರಿಸರ ಪ್ರವಾಸೋದ್ಯಮದ ಜತೆಗೆ ಕೃಷಿ, ತೋಟಗಾರಿಕಾ ವಿಶೇಷ ವಲಯವನ್ನಾಗಿ ಘೋಷಿಸುವ ಮೂಲಕ ಜಿಲ್ಲೆಯ ಕೃಷಿ, ತೋಟಗಾರಿಕಾ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಬೇಕು. ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕಿನ ಬರಪೀಡಿತ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಸರಕಾರ ಘೋಷಿಸಿರುವ ನೀರಾವರಿ ಯೋಜನೆಗಳನ್ನು ಕೂಡಲೇ ಜಾರಿ ಮಾಡಬೇಕು. ಮಲೆನಾಡಿನ ಪ್ರಮುಖ ಬೆಳೆಯಾಗಿರುವ ಅಡಿಕೆ ಬೆಳೆಗೆ ತಗುಲಿರುವ ಹಳದಿ ರೋಗ ಬಾಧೆಯಿಂದ ರಕ್ಷಣೆ ನೀಡಲು ಗೋರಖ್‍ಸಿಂಗ್ ವರದಿಯನ್ನು ಜಾರಿ ಮಾಡಬೇಕು. 2019ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿರುವ ಅತಿವೃಷ್ಟಿಯಿಂದ ನಷ್ಟಕ್ಕೊಳಗಾಗಿರುವ ಸಂತ್ರಸ್ಥರಿಗೆ ಬಾಕಿ ಪರಿಹಾರ, ಪುನರ್ವಸತಿ ಕಲ್ಪಿಸಬೇಕು. ಚಿಕ್ಕಮಗಳೂರು ನಗರದಲ್ಲಿ 10 ವರ್ಷಗಳ ಹಿಂದೆ ಆರಂಭಗೊಂಡಿರುವ ಯುಜಿಡಿ ಕಾಮಗಾರಿಯನ್ನೂ ಶೀಘ್ರ ಪೂರ್ಣಗೊಳಿಸಬೇಕು. ನೆನೆಗುದಿಗೆ ಬಿದ್ದಿರುವ ಕರಗಡ, ಮಳಲೂರು, ಗೊಂದಿ ನೀರಾವರಿ ಯೋಜನೆಗಳ ಜಾರಿಗೆ ಸರಕಾರ ಕ್ರಮವಹಿಸಬೇಕು ಎಂದು ಇದೇ ವೇಳೆ ಅಂಶುಮಂತ್ ಆಗ್ರಹಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಜಿಲ್ಲಾದ್ಯಂತ ಹೋರಾಟಗಳು ನಡೆಯುತ್ತಿದೆ. ಕಾನೂನು ಹೋರಾಟಕ್ಕೂ ಹೋರಾಟಗಾರರು ಮುಂದಾಗಿದ್ದಾರೆ. ವರದಿ ಜಾರಿ ವಿರುದ್ಧ ನಡೆಯುವ ಎಲ್ಲ ರೀತಿಯ ಹೋರಾಟಗಳಲ್ಲೂ ಪಕ್ಷ ಸಹಕಾರ, ಬೆಂಬಲ ನೀಡಲಿದೆ ಎಂದ ಅವರು, ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಅವರು ಕಸ್ತೂರಿರಂಗನ್ ವರದಿ ಜಾರಿ ಸಂಬಂಧ ಜಿಲ್ಲೆಯ ಜನರಿಗೆ ಸೂಕ್ತ ಭರವಸೆ ನೀಡುವ ನಿರೀಕ್ಷೆ ಇತ್ತು. ಆದರೆ ಸಿಎಂ ಈ ಬಗ್ಗೆ ಒಂದು ಮಾತನ್ನೂ ಹೇಳದಿರುವುದು ಜಿಲ್ಲೆಯ ಜನರಿಗೆ ಭಾರೀ ನಿರಾಶೆಯಾಗಿದೆ ಎಂದು ಇದೇ ವೇಳೆ ಅವರು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಪಿ.ಮಂಜೇಗೌಡ, ಶಿವಾನಂದಸ್ವಾಮಿ ಉಪಸ್ಥಿತರಿದ್ದರು.

ಕಸ್ತೂರಿರಂಗನ್ ವರದಿ ಜಾರಿಯಿಂದಾಗುವ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಸಂಸದೆ ಹಾಗೂ ಶಾಸಕರು ಸರಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ವರದಿ ಸಂಬಂಧ ಸಂಸತ್‍ನಲ್ಲಿ ನಡೆದ ಚರ್ಚೆಯಲ್ಲಿ ಸಂಸದೆ ಶೋಭಾ ಭಾಗವಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಯೋಜನೆ ವಿರೋಧಿಸಿ ನರಸಿಂಹರಾಜಪುರ ತಾಲೂಕಿನಲ್ಲಿ ನಡೆದ ರೈತರು, ಸಾರ್ವಜನಿಕರ ಹೋರಾಟದ ವೇದಿಕೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಕಸ್ತೂರಿರಂಗನ್ ವರದಿ ಬಗ್ಗೆ ಸಂಸತ್‍ನಲ್ಲಿ ಚರ್ಚೆ ಮಾಡದಿರಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಹೀಗೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ಕಸ್ತೂರಿರಂಗನ್ ವರದಿಯನ್ನು ಬಿಜೆಪಿ ಸರಕಾರ ಪೋಷಿಸುತ್ತಿದೆ.
- ಡಾ.ಕೆ.ಪಿ. ಅಂಶುಮಂತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News