×
Ad

ರವಿವಾರ ಎರಡನೇ ಹಂತದ ಗ್ರಾ.ಪಂ. ಚುನಾವಣೆ; 1,05,431 ಅಭ್ಯರ್ಥಿಗಳು ಕಣದಲ್ಲಿ

Update: 2020-12-26 19:35 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.26: ರಾಜ್ಯಾದ್ಯಂತ ಶಾಂತಿಯುತವಾಗಿ ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಪೂರ್ತಿಗೊಂಡ ಬಳಿಕ ಎರಡನೇ ಹಂತ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದ್ದು, ರವಿವಾರ(ಡಿ.27) ದಂದು 109 ತಾಲ್ಲೂಕುಗಳ 2,709 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ. 

ರವಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ 2,709 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಈ ಪಂಚಾಯತ್‍ಗಳ ಒಟ್ಟು ಸ್ಥಾನಗಳು 43,291 ಸ್ಥಾನಗಳಾಗಿದ್ದು, ಅದರಲ್ಲಿ ಈಗಾಗಲೇ 3,697 ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಳಿದ 39,378 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. 

ರಾಜ್ಯದಲ್ಲಿ ಎರಡನೇ ಹಂತಕ್ಕೆ ಸುಮಾರು 1,47,649 ನಾಮಪತ್ರಗಳು ಸಲ್ಲಿಕೆಯಾಗಿದ್ದು, 34,115 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಲ್ಲದೆ, 216 ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಯು ನಾಮಪತ್ರ ಸಲ್ಲಿಸದಿದ್ದರಿಂದ ಅವು ಖಾಲಿಯುಳಿದಿವೆ. ಅಂತಿಮ ಕಣದಲ್ಲಿ 1,05,431 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚುನಾವಣಾ ಆಯೋಗವು ವ್ಯವಸ್ಥಿತವಾದ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ನಡೆಸಿದ್ದು, ಬೀದರ್ ಜಿಲ್ಲೆಯಲ್ಲಿ ಇವಿಎಂ ಬಳಕೆ ಮಾಡಲಾಗುತ್ತಿದೆ. 

ಕೊರೋನ ಸೋಂಕು ಹರಡುತ್ತಿರುವ ಸಂದರ್ಭದಲ್ಲಿಯೇ ಚುನಾವಣೆ ನಡೆಸುತ್ತಿರುವ ಆಯೋಗವು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಯಾರೂ ಮತದಾನದಿಂದ ಹೊರಗುಳಿಯಬಾರದಂತೆ ಕ್ರಮ ವಹಿಸಿದ್ದು, ಕೊರೋನ ಸೋಂಕಿತರು ಮತದಾನ ಮಾಡಲು ಕೊನೆಯ 1 ಗಂಟೆ ಅವಕಾಶ ನೀಡಲಾಗುತ್ತಿದೆ.

ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, 10 ಸಾವಿರಕ್ಕೂ ಅಧಿಕ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಿದೆ. 20,728 ಮತಗಟ್ಟೆಗಳಿದ್ದು, ಸುಮಾರು 1,24,368 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ಬಾರಿ 35 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 

ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ ಮತದಾನ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆ ಪಕ್ಷಗಳ ಆಧಾರ ರಹಿತವಾಗಿ ನಡೆಯಲಿದೆ. ಆದುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ರಾಜಕೀಯ ಪಕ್ಷಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೆ ಹಾಗೂ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ರಾಜ್ಯ ಚುನಾವಣಾ ಆಯೋಗದ ಜೊತೆ ಸಹಕಾರ ನೀಡಬೇಕಿದೆ. ಅಭ್ಯರ್ಥಿಗಳು ಅಗತ್ಯ ಮಾಹಿತಿಯನ್ನು ತಿಳಿಯಬೇಕಿದೆ.

ಮತಗಟ್ಟೆಗಳ ಹೊರಗೆ ಮತದಾನ ದಿನದಂದು ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು/ ಹಂಚುವುದು ಮಾಡುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‍ಗಳು, ಬ್ಯಾನರ್ ಮತ್ತು ಬಂಟಿಂಗ್‍ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಭ್ಯರ್ಥಿಗಳು ಟಿವಿ ಮಾಧ್ಯಮಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಶಾಯಿ ಗುರುತು: ಇತ್ತೀಚಿಗೆ ವಿಧಾನಸಭಾ ಉಪ ಚುನಾವಣೆ ಹಾಗೂ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ, ಸೊಸೈಟಿಗಳಿಗೆ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರ ಎಡಗೈನ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯನ್ನು ಬಳಿಯಲಾಗುತ್ತದೆ.

ಅಭ್ಯರ್ಥಿ ಸಾವು: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ವೀರಭದ್ರಪ್ಪ ಬಡಿಗೇರ್ ಎಂಬುವವರು ಮತದಾನದ ಮುನ್ನಾ ದಿನವಾದ ಶನಿವಾರ ಕೊನೆಯುಸಿರೆಳೆದಿದ್ದಾರೆ. ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮೇಣೆಧಾಳ ಗ್ರಾಮದ 2ನೇ ವಾರ್ಡ್‍ನಿಂದ ಸಾಮಾನ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಶನಿವಾರ ಪಾರ್ಶವಾಯು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತಗಟ್ಟೆ ಪ್ರವೇಶಿಸಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News