×
Ad

ಪಿಎಫ್‍ಐ ಬಾಲ ಬಿಚ್ಚಿದರೆ ಬಾಲ, ತಲೆ ಕಟ್: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ

Update: 2020-12-26 20:14 IST

ಚಿಕ್ಕಮಗಳೂರು, ಡಿ.26: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವ ರೀತಿಯಲ್ಲಿ ಪಿಎಫ್‍ಐ ಸಂಘಟನೆಯ ಮುಖಂಡರು ವರ್ತಿಸುತ್ತಿದ್ದಾರೆ. ಪಿಎಫ್‍ಐ ಸಂಘಟನೆಯ ಮುಖಂಡರು ಬಾಲ ಬಿಚ್ಚಿ ಮೆರೆಯೋ ಕಾಲ ಈಗಿಲ್ಲ, ಬಾಲ ಬಿಚ್ಚಿ ಮೆರೆಯಲು ಹೊರಟರೇ ಬಾಲನೂ ಕಟ್ ಮಾಡುತ್ತೇವೆ, ತಲೆಯನ್ನೂ ಕಟ್ ಮಾಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿ ಮೇಲೆ ಪಿಎಫ್‍ಐ ಕಾರ್ಯಕರ್ತರ ಮುತ್ತಿಗೆ ಖಂಡಿಸಿ ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯ ಪಿಎಫ್‍ಐ ಸಂಘಟನೆ ವಿರುದ್ಧ ತನಿಖೆ ನಡೆಸುತ್ತಿದೆ. ಈ ತನಿಖೆ ಮಾಡಬಾರದೆಂದು ಹೇಳಲು ಪಿಎಫ್‍ಐ ಮುಖಂಡರಿಗೆ ಯಾವ  ಅಧಿಕಾರವಿದೆ. ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ತನಿಖೆ ಮಾಡುತ್ತಿರುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.

ಸಿಎಎ ಪ್ರತಿಭಟನೆ ಸಂದರ್ಭದಲ್ಲಿ ಪಿಎಫ್‍ಐ ಸಂಘಟನೆಗೆ ನೂರಾರು ಕೋಟಿ ಅಕ್ರಮ ಹಣ ದೇಶ ವಿದೇಶದಿಂದ ವರ್ಗಾವಣೆಯಾಗಿರುವ ಮಾಹಿತಿ ಆಧಾರದ ಮೇಲೆ ಇಡಿ ತನಿಖೆ ಮಾಡುತ್ತಿದೆ. ಆದರೆ ಪಿಎಫ್‍ಐ ಸಂಘಟನೆಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತೆ ವರ್ತಿಸುತ್ತಿದ್ದಾರೆ. ಅಕ್ರಮ, ಅರಾಜಕತೆ ಹುಟ್ಟುಹಾಕಲು ಭಾರತ ಇರೋದಲ್ಲ, ಸಂವಿಧಾನ ಬುಡ ಮೇಲು ಮಾಡಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಶರಿಯತ್ ಆಡಳಿತ ತರಬೇಕು ಎಂದರೆ ಅದನ್ನು ನೋಡಿಕೊಂಡು ಇರಲು ಭಾರತ ಸರಕಾರಕ್ಕೆ ಸಾಧ್ಯವಿಲ್ಲ. ಅಕ್ರಮ ಹಣ ವರ್ಗಾವಣೆ ನಡೆದಿರೋದರಿಂದ ಈಡಿ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ ಮಾಡಿದವರ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತೇವೆ ಎಂದರು.

ಅರಬ್ ದೇಶಗಳಿಂದ ಹಣ ಬಂದಿರುವ ಮಾಹಿತಿ ಇದೆ, ಈ ಹಣ ಏಕೆ ಬಂತು?, ಭಯೋತ್ಪಾದನೆ ಮಾಡುವುದಕ್ಕ? ದೇಶದಲ್ಲಿ ಅರಾಜಕತೆ ಹುಟ್ಟುಹಾಕಲು ಅವಕಾಶ ನೀಡಬೇಕಾ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ಅಕ್ರಮದ ಬಗ್ಗೆ ತನಿಖೆ ನಡೆಸಿದರೆ ಸಂಸದರು, ರಾಜ್ಯಾಧ್ಯಕ್ಷರ ಕಚೇರಿ ಮೇಲೆ ಮುತ್ತಿಗೆ ಹಾಕುತ್ತೀರಾ?, ನಮ್ಮನ್ನು ಏನೆಂದು ತಿಳಿದಿದ್ದೀರಿ, ಬಾಲ ಬಿಚ್ಚಿ ಮೆರೆಯೋ ಕಾಲ ಈಗಿಲ್ಲ, ಬಾಲ ಬಿಚ್ಚಿದರೆ ಬಾಲ ಕಟ್ ಮಾಡುತ್ತೇವೆ, ತಲೆಯನ್ನೂ ಕಟ್ ಮಾಡುತ್ತೇವೆಂದು ಸಿ.ಟಿ.ರವಿ ಹೇಳಿದ್ದಾರೆ.

'ಪಾಟೀಲ್ ಹೇಳಿಕೆಯಿಂದ ಪಕ್ಷದ ಇಮೇಜ್‍ಗೆ ಧಕ್ಕೆ'
ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿಸಿದ ಸಿ.ಟಿ.ರವಿ, ಯತ್ನಾಳ್ ಹೇಳಿಕೆಯಿಂದ ಅನಗತ್ಯ ಗೊಂದಲ ಮೂಡಿಸುತ್ತಿದೆ. ನಾಯಕತ್ವ ಬದಲಾವಣೆ ಕುರಿತು ನಿರ್ಧಾರ ತಗೆದುಕೊಳ್ಳುವುದು ಪಾರ್ಲಿಮೆಂಟರಿ ಬೋರ್ಡ್, ಅನಗತ್ಯ ಗೊಂದಲವನ್ನು ಯಾರೂ ನಿರ್ಮಾಣ ಮಾಡಬಾರದು. ರಾಜ್ಯಕ್ಕೆ ಸಂಕ್ರಾಂತಿ ನಂತರ ಅಮಿತ್ ಶಾ ಆಗಮನದ ಬಗ್ಗೆ ಇನ್ನು ಖಚಿತವಾಗಿಲ್ಲ, ಬಸವನಗೌಡ ಯತ್ನಾಳ್ ಹೇಳಿಕೆ ರಾಜ್ಯ ಸರಕಾರ ಮತ್ತು ಪಕ್ಷದ ಇಮೇಜ್‍ಗೆ ಧಕ್ಕೆ ತರುತ್ತದೆ ಎಂದು ಸಿ.ಟಿ.ರವಿ ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News