×
Ad

ಅಕ್ರಮ ಗಣಿಗಾರಿಕೆಯಲ್ಲಿ ಈಶ್ವರಪ್ಪ ಸಂಬಂಧಿಗಳ ಪಾಲು: ಟಪಾಲ್ ಗಣೇಶ್ ಆರೋಪ

Update: 2020-12-26 22:40 IST

ಬಳ್ಳಾರಿ, ಡಿ.26: ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಆರೋಪದ ಮೇಲೆ ಗಣಿಗಾರಿಕೆ ಗುತ್ತಿಗೆಯನ್ನು ರದ್ದು ಮಾಡಲು ಶಿಫಾರಸ್ಸು ಮಾಡಿರುವ ಹಿಂದ್ ಟ್ರೇಡರ್ಸ್ ಕಂಪನಿಯ ಪಾಲುದಾರರಾಗಿ ಸಚಿವ ಈಶ್ವರಪ್ಪ ಸಂಬಂಧಿಗಳು ಸೇರ್ಪಡೆಗೊಂಡಿದ್ದು, ಇದರ ಹಿಂದೆ ಸಚಿವರ ಕೈವಾಡವಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ರದ್ಧತಿಯ ಹಿನ್ನೆಲೆಯಲ್ಲಿ ಕಂಪನಿಯ ಗುತ್ತಿಗೆಯನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ. ಅಂತಹ ಕಂಪನಿಯ ಪಾಲುದಾರರಾಗಿ ಸಚಿವ ಈಶ್ವರಪ್ಪರ ಸಂಬಂಧಿಗಳಾದ ಬಂಗಾರು ಸೋಮಶೇಖರ್, ಕೆ.ಶೈಲಾ ಮತ್ತು ಈಶ್ವರಪ್ಪನ ಆಪ್ತ ಪುಟ್ಟಸ್ವಾಮಿಗೌಡ ಸೇರ್ಪಡೆಗೊಂಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.

ನ್ಯಾ.ಎನ್.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ನೀಡಿದ್ದ ವರದಿಯನ್ನು ಆಧಾರವಾಗಿಟ್ಟುಕೊಂಡು 19 ಹೆಕ್ಟೇರ್ ಪ್ರದೇಶದ ಗುತ್ತಿಗೆಯನ್ನು ರದ್ದುಪಡಿಸುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಶಿಫಾರಸ್ಸು ಮಾಡಿ ಪತ್ರ ಬರೆಯಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ಈಶ್ವರಪ್ಪರ ಆಪ್ತರು ಕಂಪನಿಯ ಪಾಲುದಾರರಾಗಿ 2018ರಲ್ಲಿ ಸೇರಿದ್ದು, ತೆರೆಮರೆಯಲ್ಲಿ ನಿಂತು ಸಚಿವರು ಗಣಿಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಹುನ್ನಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಸಚಿವರ ಆಪ್ತರು ಪಾಲುದಾರರಾಗಿರುವ ಸಂಸ್ಥೆಯ ಗುತ್ತಿಗೆ ಪ್ರದೇಶದ ಸುತ್ತಲೇ ಅಂತರರಾಜ್ಯ ಗಡಿ ಗುರುತಿಸುವ ಸಮೀಕ್ಷೆಯೂ ನಡೆದಿದೆ. ಗಣಿಗಾರಿಕೆ ವಿವಾದ ಮತ್ತು ಸಮೀಕ್ಷೆಯ ಕಾರಣಕ್ಕಾಗಿ ನಿಗದಿತ ಗಡುವಿನಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ದೊರಕಿಲ್ಲ. ಆದರೆ ಗುತ್ತಿಗೆ ಅವಧಿ ಮುಗಿದಿದೆ. ಹೀಗಾಗಿ ಗಣಿಗಾರಿಕೆ ನಡೆಸದ ಅವಧಿಯನ್ನು ಪರಿಗಣಿಸಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‍ನಲ್ಲಿ ನಾವು ಅರ್ಜಿ ಸಲ್ಲಿಸಿದ್ದೇವೆ. ಹಿಂದ್ ಟ್ರೇಡರ್ಸ್ ಕೂಡ ಅರ್ಜಿ ಸಲ್ಲಿಸಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News