ಬಜೆಟ್‍ನಲ್ಲಿ ದಿವ್ಯಾಂಗರ ಕಲ್ಯಾಣ ಕಾರ್ಯಗಳಿಗೆ ಶೇ.5ರಷ್ಟು ಅನುದಾನ: ಸಿ.ಟಿ.ರವಿ
ಚಿಕ್ಕಮಗಳೂರು, ಡಿ.26: ರಾಜ್ಯ ಸರಕಾರವು ದಿವ್ಯಾಂಗರ ಕಲ್ಯಾಣ ಕಾರ್ಯಗಳಿಗೆ ಆಯವ್ಯಯದಲ್ಲಿ ಶೇ.5ರಷ್ಟು ಅನುದಾನವನ್ನು ಶಾಸನಬದ್ಧಗೊಳಿಸಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿಪಂ, ತಾಪಂ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 53 ದಿವ್ಯಾಂಗರಿಗೆ ಉಚಿತ ಮೋಟಾರ್ ಸೈಕಲ್ ವಿತರಿಸಿ ಮಾತನಾಡಿದ ಅವರು, ಅಂಗವೈಕಲ್ಯ ಎನ್ನುವುದು ಬದುಕಿಗೆ ಅಡ್ಡಿಯಾಗಬಾರದು. ಬಹುತೇಕ ಅಂಗವಿಕಲರು ಆತ್ಮವಿಶ್ವಾಸದಿಂದ ಬಹುದೊಡ್ಡ ಸಾಧನೆ ತೋರಿದ್ದಾರೆ. ಅವರ ಜೀವನ ಕ್ರಮಗಳು, ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ ಜಿಪಂ, ತಾಪಂ, ನಗರಸಭೆ ಅನುದಾನದಲ್ಲಿ, ದಿವ್ಯಾಂಗರ ಕಲ್ಯಾಣ ಕಾರ್ಯಗಳಿಗೆ ಶೇ.20ರಷ್ಟು ಅನುದಾನ ಮೀಸಲಿರಿಸಲಾಗಿದೆ. 53 ದಿವ್ಯಾಂಗರಿಗೆ ಮೋಟರ್ ಸೈಕಲ್ ವಿತರಿಸಲಾಗಿದೆ. ವಾಹನಗಳು ದುರುಪಯೋಗವಾಗದಂತೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ ಅವರು, ರಾಜ್ಯ ಸರಕಾರವು ದಿವ್ಯಾಂಗರ ಕಲ್ಯಾಣ ಕಾರ್ಯಗಳಿಗೆ ಆಯವ್ಯಯದಲ್ಲಿ ಶೇ.5ರಷ್ಟು ಅನುದಾನವನ್ನು ಶಾಸನಬದ್ದಗೊಳಿಸಿದೆ. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಎಲ್ಲಾ ದಿವ್ಯಾಂಗರಿಗೂ ಮುಂದಿನ ಬಜೆಟ್‍ನ ಅನುದಾನದಲ್ಲಿ ಹಿರಿತನದ ಆಧಾರದಲ್ಲಿ ಪ್ರತಿಯೊಬ್ಬರಿಗೂ ಆದ್ಯತೆಯ ಮೇಲೆ ಮೋಟಾರ್ ಸೈಕಲ್ ವಿತರಿಸಲಾಗುವುದು ಎಂದರು.
ಜಿಪಂ ಉಪಾಧ್ಯಕ್ಷ ಸೋಮಶೇಖರಪ್ಪ ಮಾತನಾಡಿ, ಜಿಪಂ ಅನುದಾನದಲ್ಲಿ ಪ್ರತೀ ಸದಸ್ಯರಿಗೂ ಫಲಾನುಭವಿಗಳನ್ನು ಗುರುತಿಸಿ ಮೋಟಾರ್ ವಾಹನ ವಿತರಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮವಹಿಸಲಾಗುವುದು. ಈಗಾಗಲೇ ಜಿ.ಪಂನಲ್ಲಿ ಮೊದಲ ಹಂತದಲ್ಲಿ 28 ಮೋಟರ್ ಸೈಕಲ್ ವಿತರಿಸಲಾಗಿದೆ. ಸ್ಥಳೀಯ ಶಾಸಕರು ಸುಮಾರು 180ಕ್ಕೂ ಹೆಚ್ಚು ಮೋಟರ್ ವಾಹನಗಳನ್ನು ವಿತರಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಸಿಂತಾಅನಿಲ್‍ಕುಮಾರ್, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್ ಮಾತನಾಡಿದರು. ಜಿಪಂ ಸದಸ್ಯ ಬೆಳವಾಡಿ ರವೀಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಮುಖಂಡರಾದ ವರಸಿದ್ದಿ ವೇಣುಗೋಪಾಲ್, ತಾಪಂ ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ನೆಟ್ಟಿಕೆರೆಹಳ್ಳಿ ಜಯಣ್ಣ, ಎಸ್ಸಿ ಮೊರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್, ಎ.ಪಿ.ಎಂ.ಸಿ ಅಧ್ಯಕ್ಷ ಶಿವಕುಮಾರ್, ಅಧಿಕಾರಿ ವೀರೇಶ್ ಉಪಸ್ಥಿತರಿದ್ದರು.