2ನೇ ಹಂತದ ಗ್ರಾಪಂ ಚುನಾವಣೆ: ಬಿರುಸಿನ ಮತದಾನ

Update: 2020-12-27 05:54 GMT

ಬೆಂಗಳೂರು, ಡಿ.27: ರಾಜ್ಯಾದ್ಯಂತ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. ರಾಜ್ಯದ 109 ತಾಲೂಕುಗಳ 2,709 ಗ್ರಾಮ ಪಂಚಾಯತ್‌ಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಹಲವೆಡೆ ಬೆಳಗ್ಗೆಯೇ ಬಿರುಸಿನ ಮತದಾನವಾಗುತ್ತಿರುವುದು ವರದಿಯಾಗಿದೆ.

 ಮತಪಟ್ಟಿಗೆಯಲ್ಲಿ ಉಂಟಾದ ಅಡಚಣೆಯಿಂದಾಗಿ ಅರ್ಧಗಂಟೆ ವಿಳಂಬವಾಗಿ ಮತದಾನ ಆರಂಭಗೊಂಡ ಘಟನೆ ಕಾಪು ತಾಲೂಕಿನ ಹೆಜಮಾಡಿ ಕೋಡಿಯ ಮತಗಟ್ಟೆಯಿಂದ ವರದಿಯಾಗಿದೆ. 

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಇಂದು ಅಥಣಿ ವಿಧಾನಸಭಾ ಕ್ಷೇತ್ರದ ನಾಗನೂರ್ ಪಿ.ಕೆ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ತೆರಳಿ ಮತ ಚಲಾಯಿಸಿದರು.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಶಾಲೆಯಲ್ಲಿ ಶಾಸಕ ಹರೀಶ್ ಪೂಂಜಾ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಸುಳ್ಯ ಶಾಸಕ ಎಸ್.ಅಂಗಾರ ಅವರು ಅಮರ ಮುಡ್ನೂರು ಗ್ರಾಮ ಪಂಚಾಯತ್ ನ ಮೂರನೇ ವಾರ್ಡ್ ದೊಡ್ಡತೋಟ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಿದರು.

ಎರಡನೇ ಹಂತದಲ್ಲಿ 2,709 ಗ್ರಾಪಂಗಳಿಗೆ ಚುನಾವಣೆ ಇಂದು ನಡೆಯುತ್ತಿದೆ. ಈ ಪಂಚಾಯತ್‌ಗಳಲ್ಲಿ ಒಟ್ಟು 43,291 ಸ್ಥಾನಗಳಾಗಿದ್ದು, ಈ ಪೈಕಿ 3,697 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಉಳಿದ 39,378 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ರಾಜ್ಯಾದ್ಯಂತ ಎರಡನೇ ಹಂತದ ಚುನಾವಣೆಗೆ ಸುಮಾರು 1,47,649 ನಾಮಪತ್ರಗಳು ಸಲ್ಲಿಕೆಯಾಗಿದ್ದು, 34,115 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಲ್ಲದೆ, 216 ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಯು ನಾಮಪತ್ರ ಸಲ್ಲಿಸದಿದ್ದರಿಂದ ಅವು ಖಾಲಿ ಉಳಿದಿವೆ. ಅಂತಿಮ ಕಣದಲ್ಲಿರುವ 1,05,431 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಇಂದು ಮತದಾರರು ನಿರ್ಧರಿಸಲಿದ್ದಾರೆ.

ಚುನಾವಣಾ ಆಯೋಗವು ವ್ಯವಸ್ಥಿತವಾದ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ನಡೆಸಿದ್ದು, ಬೀದರ್ ಜಿಲ್ಲೆಯಲ್ಲಿ ಇವಿಎಂ ಬಳಕೆಯಾಗುತ್ತಿರುವುದು ವಿಶೇಷವಾಗಿದೆ. ಕೊರೋನ ಸೋಂಕು ಹರಡುತ್ತಿರುವ ಸಂದರ್ಭದಲ್ಲಿಯೇ ಚುನಾವಣೆ ನಡೆಸುತ್ತಿರುವ ಆಯೋಗವು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಕೊರೋನ ಸೋಂಕಿತರು ಮತದಾನ ಮಾಡಲು ಕೊನೆಯ 1 ಗಂಟೆ ಅವಕಾಶ ನೀಡಲಾಗಿದೆ.

ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 20,728 ಮತಗಟ್ಟೆಗಳಿದ್ದು, ಸುಮಾರು 1,24,368 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಬಾರಿ 35 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 10 ಸಾವಿರಕ್ಕೂ ಅಧಿಕ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News