ಸಿರಾ: ಕೆಟ್ಟು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಢಿಕ್ಕಿ; ಮೂವರು ಮೃತ್ಯು

Update: 2020-12-27 05:40 GMT

ತುಮಕೂರು, ಡಿ.27: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಮತ್ತೊಂದು ಲಾರಿ ಢಿಕ್ಕಿ ಹೊಡೆದ ಪರಿಣಾಮ ಎರೆಡು ಲಾರಿಗಳ ಚಾಲಕರ ಸಹಿತ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಸಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ನಗರದ ಕ್ರಾಸ್ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.

ಕೆಟ್ಟು ನಿಂತಿದ್ದ ಲಾರಿಯ ಚಾಲಕ ಶ್ರೀನಿವಾಸ್ (35) ಹಾಗೂ ಮಹೇಶ್ (38) ಹಾಗೂ ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಲಾರಿಯ ಚಾಲಕ ನಿಂಗರಾಜು (40) ಮೃತಪಟ್ಟವರಾಗಿದ್ದಾರೆ.

ಹೊಸ ಪೇಟೆಯಿಂದ ತಮಿಳುನಾಡಿಗೆ ಭತ್ತ ಕಟಾವ್ ಮಾಡುವ ಯಂತ್ರದ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದ ಈಚರ್ ಲಾರಿಯ ಟಯರ್ ಶನಿವಾರ ರಾತ್ರಿ 1:30ರ ಸುಮಾರಿಗೆ ಪಂಕ್ಚರ್ ಆಗಿತ್ತು. ಈ ಹಿನ್ನೆಲೆಯಲ್ಲಿ ಲಾರಿ ಟಯರ್ ಬದಲಾಯಿಸುತ್ತಿದ್ದ ವೇಳೆ ಹೊಸಪೇಟೆ ಯಿಂದ ಬೆಂಗಳೂರಿಗೆ ಕೋಳಿ ಮೊಟ್ಟೆ ಕೊಂಡೊಯ್ಯುತ್ತಿದ್ದ ಲಾರಿ ಹಿಂದಿನಿಂದ ಬಂದು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ.

ಕೆಟ್ಟು ನಿಂತಿದ್ದ ಲಾರಿಯ ಚಾಲಕ ಶ್ರೀನಿವಾಸ್ ರಾಣಿಬೆನ್ನೂರಿನ ನಿವಾಸಿಯಾಗಿದ್ದು, ಈತನ ಜೊತೆಯಲ್ಲಿ ಇದ್ದ ಕ್ಲೀನರ್ ಮಹೇಶ್ ಹರಿಹರದ ನಿವಾಸಿ ಎಂದು ತಿಳಿದುಬಂದಿದೆ.

ಅಪಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿದ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳಕ್ಕೆ ಸಿರಾ ಗ್ರಾಮಾಂತರ ಡಿವೈಎಸ್ಪಿ ಕುಮಾರಪ್ಪ, ವೃತ್ತ ನಿರೀಕ್ಷಕ ರವಿಕುಮಾರ್ ಇವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News