ಜಾಮೀನು ಹೊಸ ತಪ್ಪುಗಳನ್ನು ಮಾಡಲು ನೀಡುವ ಪರವಾನಿಗೆಯಲ್ಲ: ಹೈಕೋರ್ಟ್

Update: 2020-12-27 12:45 GMT

ಬೆಂಗಳೂರು, ಡಿ. 27: ನ್ಯಾಯಾಲಯ ಆರೋಪಿಗಳಿಗೆ ನೀಡುವ ಜಾಮೀನು, ನಿರೀಕ್ಷಣಾ ಜಾಮೀನು ಹೊಸ ತಪ್ಪುಗಳನ್ನು ಮಾಡಲು ನೀಡುವ ಪರವಾನಿಗೆ ಅಲ್ಲ ಎಂದಿರುವ ಹೈಕೋರ್ಟ್ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳಿಗೆ ಎಚ್ಚರಿಕೆ ನೀಡಿದೆ.

ಎಟಿಎಂ ಯಂತ್ರದಲ್ಲಿ ಬಳಕೆದಾರರ ಕಾರ್ಡ್ ನಂಬರ್ ಹಾಗೂ ಪಾಸ್ವರ್ಡ್‍ಗಳ ಮಾಹಿತಿ ಸಂಗ್ರಹಿಸಲು ಸ್ಕಿಮ್ಮರ್ ಅಳವಡಿಸಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಿದೇಶಿ ಮಹಿಳೆಗೆ ಜಾಮೀನು ನೀಡುವ ವೇಳೆ ಹೈಕೋರ್ಟ್ ಈ ಎಚ್ಚರಿಕೆ ನೀಡಿತು.

ಪ್ರಕರಣವೇನು: 2020ರ ಫೆ.25ರ ರಾತ್ರಿ 10 ಗಂಟೆಯಿಂದ 10.05ರ ನಡುವೆ ರಾಮನಗರ ಜಿಲ್ಲೆಯ ಬಿಡದಿ ನಿವಾಸಿ ಪವಿತ್ರಾ ಎಂಬುವರ ಖಾತೆಯಿಂದ 90 ಸಾವಿರ ಹಣ(ಎಟಿಎಂನಿಂದ) ಡ್ರಾ ಮಾಡಿದ ಮೆಸೇಜ್‍ಗಳು ಬಂದಿದ್ದವು. ಈ ಸಂಬಂಧ ಪವಿತ್ರಾ ರಾಮನಗರದ ಸೈಬರ್ ವಿಶೇಷ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ, ಎಟಿಎಂನಿಂದ ನಕಲಿ ಕಾರ್ಡ್ ಬಳಸಿ ಡ್ರಾ ಮಾಡಿರುವುದು ಪತ್ತೆಯಾಗಿತ್ತು. ಅದರಂತೆ, ವಿದ್ಯಾರ್ಥಿ ವೀಸಾ ಮೇಲೆ ಭಾರತಕ್ಕೆ ಬಂದಿರುವ ಹಾಗೂ ಯಲಹಂಕದ ವೆಂಕಟ್ ವಿಂಗ್ಸ್ ರಾಯಲ್ ಅಪಾಟ್ಮೆರ್ಂಟ್ ನಲ್ಲಿ ವಾಸವಿದ್ದ ಅಲುಕಾ ಸಾಂಡ್ರಾ ಓರೆವಾನನ್ನು ಪೊಲೀಸರು ಬಂಧಿಸಿದ್ದರು.

ಬಂಧನದ ಬಳಿಕ ಆರೋಪಿ ಯುವತಿ ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಳು. ವಿಚಾರಣೆ ವೇಳೆ ಆರೋಪಿ ಯುವತಿ ಪರ ವಾದಿಸಿದ್ದ ಹಿರಿಯ ವಕೀಲರು, ಆರೋಪಿಯು ವಿದೇಶಿ ಯುವತಿಯಾಗಿದ್ದಾಳೆ. ಆಕೆಯ ಪಾಸ್ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಯುವತಿ ತನಿಖೆಗೆ ಸಹಕರಿಸಲು ಸಿದ್ದಳಿದ್ದು, ಜಾಮೀನು ನೀಡಬೇಕು. ಈ ಪ್ರಕರಣದಲ್ಲಿ ಜಾಮೀನು ನೀಡಲು ಅವಕಾಶವಿದೆ ಎಂದು ಪೀಠಕ್ಕೆ ತಿಳಿಸಿದ್ದರು. 

ಇದಕ್ಕೆ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ಆರೋಪಿ ಯುವತಿ ಇಂತಹುದೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಆಕೆಯೊಂದಿಗೆ ಹಲವು ಜನರ ತಂಡವಿದ್ದು ಇಂತಹುದ್ದೇ 60 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದ್ದರು. 

ವಾದ ಪ್ರತಿವಾದ ದಾಖಲಿಸಿಕೊಂಡಿರುವ ಪೀಠ, ಜಾಮೀನು ಪಡೆಯುವಂತಹ ಅಪರಾಧ ಎಂಬ ಕಾರಣಕ್ಕಾಗಿ ಆರೋಪಿ ಅದನ್ನು ತನ್ನ ಹಕ್ಕು ಎಂದು ಪರಿಗಣಿಸುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ನ್ಯಾಯಾಲಯ ಆರೋಪಿಗೆ ನೀಡುವ ಜಾಮೀನು ಸಮಾಜದ ಮೇಲೆ ಯಾವೆಲ್ಲ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಅತ್ಯಂತ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 

ಅಂತಿಮವಾಗಿ ಮಹಿಳೆ ಎಂಬ ಅಂಶವನ್ನು ಪರಿಗಣಿಸಿ ಹೈಕೋರ್ಟ್ ಜಾಮೀನು ನೀಡಿದೆ. ಅದೇರೀತಿ ಪೊಲೀಸರು ಪಾಸ್‍ಪೋರ್ಟ್ ಮತ್ತಿತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ. ಆರೋಪಿಗೆ 1 ಲಕ್ಷ ಮೊತ್ತದ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ಯಲಹಂಕ ಪೊಲೀಸ್ ಠಾಣೆಗೆ ಪ್ರತಿ ರವಿವಾರ ಬೆಳಗ್ಗೆ ಹಾಜರಾಗಿ ರುಜು ಹಾಕಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News