ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಡಿವೈಎಸ್ಪಿ ಆತ್ಮಹತ್ಯೆ

Update: 2020-12-27 13:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 27: ರಾಷ್ಟ್ರಪತಿ ಪದಕ ಪುರಸ್ಕೃತರಾಗಿದ್ದ ನಿವೃತ್ತ ಡಿವೈಎಸ್ಪಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರದ ಎಂ.ಸಿ. ಲೇಔಟ್ ಮನೆಯೊಂದರಲ್ಲಿ ವಾಸವಾಗಿದ್ದ ಹನುಮಂತಪ್ಪ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ನಿವೃತ್ತ ಡಿವೈಎಸ್ಪಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಹನುಮಂತಪ್ಪ, ಡಿ.28ರಂದು ಚಿಕಿತ್ಸೆಗೆ ಒಳಪಡಬೇಕಿತ್ತು. ಅದೇ ಕಾರಣಕ್ಕೆ ಖಿನ್ನತೆಗೊಳಗಾಗಿ ಶನಿವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹನುಮಂತಪ್ಪ ಅವರು ನಗರದ ಮಾಗಡಿರಸ್ತೆ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇನ್‍ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ವಿಜಯನಗರ ಉಪವಿಭಾಗ ಹಾಗೂ ಯಶವಂತಪುರ ಉಪವಿಭಾಗದ ಎಸಿಪಿಯಾಗಿ ಸೇವೆ ಸಲ್ಲಿಸಿದ್ದರು.

ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹನುಮಂತಪ್ಪ, ಅದೇ ಕಾರ್ಯಾಚರಣೆಯಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ, ರಾಷ್ಟ್ರಪತಿಗಳ ಪದಕ ಗೌರವಕ್ಕೂ ಭಾಜನರಾಗಿ, 2013ರಲ್ಲಿ ನಿವೃತ್ತಿ ಹೊಂದಿದ್ದರು ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News