ಚಿಕ್ಕಮಗಳೂರು: ದತ್ತಜಯಂತಿಗೆ ವಿದ್ಯುಕ್ತ ಚಾಲನೆ

Update: 2020-12-27 13:41 GMT

ಚಿಕ್ಕಮಗಳೂರು, ಡಿ.27: ಬಜರಂಗದಳ ಹಾಗೂ ವಿಎಚ್‍ಪಿ ಸಂಘಟನೆಗಳು ಹಮ್ಮಿಕೊಂಡಿರುವ ಮೂರು ದಿನಗಳ ದತ್ತಜಯಂತಿ ಕಾರ್ಯಕ್ರಮದ ಅಂಗವಾಗಿ ರವಿವಾರ ನಗರದಲ್ಲಿ ಅನುಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆ ನಡೆಯಿತು. ಸಂಕೀರ್ತನಾ ಯಾತ್ರೆಯಲ್ಲಿ ಚಲನಚಿತ್ರ ನಟಿ ತಾರಾ ಭಾಗವಹಿಸಿದ್ದರು. 

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ನಗರದ ಬೋಳರಾಮೇಶ್ವರ ದೇವಾಲಯದ ಆವರಣದಿಂದ ಸಂಕೀರ್ತನಾ ಯಾತ್ರೆಯ ಮೆರವಣಿಗೆ ಹೊರಟು ಬಸವನಹಳ್ಳಿ ರಸ್ತೆಯಲ್ಲಿರುವ ಕಾಮಧೇನು ಮಹಾಗಣಪತಿ ದೇವಾಲಯದ ಆವರಣದಲ್ಲಿ ಮೆರವಣಿಗೆ ಸಮಾಪ್ತಿಗೊಂಡಿತು. ಸಂಕೀರ್ತನಾ ಯಾತ್ರೆಯುದ್ದಕ್ಕೂ ದತ್ತಮೂರ್ತಿಯ ಪಲ್ಲಕ್ಕಿಯ ಮೆರವಣಿಗೆ ಮಾಡಲಾಯಿತು. 

ಅನುಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆಗೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿತ್ತು. ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ ನಿಯೋಜಿಸಲಾಗಿತ್ತು. ನಗರದ ಎಲ್ಲ ರಸ್ತೆಗಳಲ್ಲೂ ಖಾಕಿ ಸರ್ಪಗಾವಲು ಕಂಡುಬಂತು. ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಗೂ ಎಎಸ್ಪಿ ಶೃತಿ ಮೆರವಣಿಗೆಯುದ್ದಕ್ಕೂ ಸಾಗಿ ಬಂದೋಬಸ್ತ್ ನ ಉಸ್ತುವಾರಿ ವಹಿಸಿದ್ದರು.

ಸಂಕೀರ್ತನಾ ಯಾತ್ರೆಯ ಬಳಿಕ ಕಾಮಧೇನು ಗಣಪತಿ ದೇವಾಲಯದ ಆವರಣದಿಂದ ಮಹಿಳೆಯರು ವಿವಿಧ ವಾಹನಗಳಲ್ಲಿ ಗುರುದತ್ತಾತ್ರೇಯ ಬಾಬಾ ಬುಡನ್‍ಗಿರಿಗೆ ತಂಡೋಪತಂಡವಾಗಿ ತೆರಳಿದರು. 

ನಂತರ ಸಮೀಪದಲ್ಲಿ ನಿರ್ಮಿಸಲಾಗಿದ್ದ ಪೆಂಡಾಲ್‍ನಲ್ಲಿ ಮಹಿಳಾ ಭಕ್ತರು ವಿವಿಧ ಹೋಮ ಹವನಗಳಂತಹ ಪೂಜಾ ವಿಧಿಗಳನ್ನು ನೆರವೇರಿಸಿದರು. ಚಲನಚಿತ್ರ ನಟಿ ತಾರಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ಯಾಮಲಾ ಕುಂದೂರು, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸಿ.ಟಿ.ರವಿ ಸೇರಿದಂತೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News