×
Ad

ವಿಸ್ಟ್ರಾನ್ ಕಾರ್ಖಾನೆಯು ಮುಂದಿನ 20 ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ: ಸಚಿವ ಶಿವರಾಮ್ ಹೆಬ್ಬಾರ್

Update: 2020-12-27 21:14 IST

ಕೋಲಾರ, ಡಿ. 27: ವಿಸ್ಟ್ರಾನ್ ಕಾರ್ಖಾನೆಯು ಮುಂದಿನ 20 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಪ್ರಾರಂಭಿಸಿ ಯಥಾಸ್ಥಿತಿಯಲ್ಲಿ ಉತ್ಪಾದನೆ ಪ್ರಾರಂಭಿಸುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರು ತಿಳಿಸಿದರು.

ರವಿವಾರ ನರಸಾಪುರದ ವಿಸ್ಟ್ರಾನ್ ಕಾರ್ಖಾನೆಗೆ ಭೇಟಿ ನೀಡಿ ಕಂಪನಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಖಾನೆಯಲ್ಲಿ ನಡೆದಿದ್ದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡು, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾರ್ಖಾನೆಯ ಹಿರಿಯ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಪೂರ್ಣಪ್ರಮಾಣದ ಮಾಹಿತಿ ದೊರೆತಿಲ್ಲ. ಮುಂದಿನವಾರ ವಿಕಾಸಸೌಧದಲ್ಲಿ ಸಭೆ ನಡೆಸಿ ಗಲಭೆಗೆ ನಿಖರ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರವು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೈಗಾರಿಕಾ ಸರಳಿಕರಣ ನೀತಿಯನ್ನು ಜಾರಿಗೆ ತಂದಿದ್ದು, ಇದರಿಂದ ಹೆಚ್ಚಿನ ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆಯಾಗಿ ಹೆಚ್ಚು ಹೆಚ್ಚು ಉದ್ಯೋಗಗಳು ಸ್ಥಳೀಯರಿಗೆ ದೊರೆಯುತ್ತವೆ. ಸರ್ಕಾರವು ಕೈಗಾರಿಕಾ ಸ್ನೇಹಿ ಹಾಗೂ ಉದ್ಯೋಗಿ ಸ್ನೇಹಿಯಾಗಿದೆ. ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಸೂಕ್ತ ವೇತನ ದೊರೆಯುವಂತೆ ನೋಡಿಕೊಳ್ಳಲಾಗುವುದು. ಮ್ಯಾನೇಜ್ಮೆಂಟ್ ಮತ್ತು ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಕಾರ್ಮಿಕ ಇಲಾಖೆ ಬದ್ಧವಾಗಿದೆ. ಕಾರ್ಮಿಕರಿಗೆ ನೀಡಬೇಕಾದ ಪೂರ್ಣ ವೇತನವನ್ನು ಕೊಡಿಸಲಾಗುವುದು ಎಂದು ತಿಳಿಸಿದರು.

ವಿಸ್ಟ್ರಾನ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸಂಬಳ ನೀಡದಿರುವ ಕುರಿತು, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಅಥವಾ ಜನಪ್ರತಿನಿಧಿಗಳ ಗಮನಕ್ಕೆ ಮಾಹಿತಿ ನೀಡಿರಲಿಲ್ಲ. ಮಾಹಿತಿ ಗೊತ್ತಿದ್ದರೆ ಈ ರೀತಿ ಘಟನೆ ನಡೆಯಲು ಅವಕಾಶ ನೀಡುತ್ತಿರಲಿಲ್ಲ. ಈಗಾಗಲೇ ಕಾರ್ಖಾನೆಯ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿದ್ದು ಗಲಭೆಯಲ್ಲಿ ನೇರವಾಗಿ ಭಾಗಿಯಾಗಿರುವರನ್ನು ಹೊರತುಪಡಿಸಿ, ಉಳಿದ ನಿರಪರಾಧಿಗಳಿಗೆ ಕಾರ್ಖಾನೆಯಲ್ಲಿ ಕೆಲಸ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಟೊಯೋಟಾ ಕಾರ್ಖಾನೆಯು ಕಳೆದ  26 ದಿನಗಳಿಂದ ಬಂದಾಗಿತ್ತು. ಈ ಸಂಬಂಧ ಮೂರು ಸಭೆಗಳನ್ನು ನಡೆಸಿ, ಕಾರ್ಖಾನೆಯ ಮೊದಲ ಪಾಳಿಯು ಪ್ರಾರಂಭವಾಗಿದೆ. ಮುಂದಿನ 10 ದಿನಗಳಲ್ಲಿ ಎರಡನೇ ಪಾಳಿಯು ಪ್ರಾರಂಭವಾಗುವ ಭರವಸೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್, ಲೋಕಸಭಾ ಸಂಸದರಾದ ಎಸ್ ಮುನಿಸ್ವಾಮಿ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸಗೌಡ, ಕಾರ್ಮಿಕ ಇಲಾಖೆ ಆಯುಕ್ತರಾದ ಅಕ್ರಂಪಾಷ, ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News