×
Ad

ನಿರ್ಭಯಾ ಯೋಜನೆಯ ಟೆಂಡರ್ ವಿಚಾರ: ಐಪಿಎಸ್ ಅಧಿಕಾರಿಗಳಿಬ್ಬರ ನಿಲ್ಲದ ಆರೋಪ-ಪ್ರತ್ಯಾರೋಪ

Update: 2020-12-27 21:28 IST
ಹೇಮಂತ್ ನಿಂಬಾಳ್ಕರ್ / ಡಿ.ರೂಪಾ

ಬೆಂಗಳೂರು, ಡಿ. 27: ಮಹಿಳೆಯರು-ಮಕ್ಕಳ ಸುರಕ್ಷತೆಗಾಗಿ ಮೀಸಲಿಟ್ಟಿರುವ ‘ನಿರ್ಭಯಾ ನಿಧಿ’ ಯೋಜನೆಯ ಬಹುಕೋಟಿ ಟೆಂಡರ್ ವಿಚಾರವಾಗಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ನಡುವೆ ಆರೋಪ-ಪ್ರತ್ಯಾರೋಪ ಮುಂದುವರೆದಿದೆ.

ರವಿವಾರ ಈ ಕುರಿತು ಪ್ರತಿಕ್ರಿಯಿಸಿರುವ ಹೇಮಂತ್ ನಿಂಬಾಳ್ಕರ್, ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಯುತ್ತಿದೆ. ಸುರಕ್ಷತಾ ನಗರ ಯೋಜನೆಯ ಟೆಂಡರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳಲ್ಲಿ ಹುರುಳಿಲ್ಲ. ಸಾಕ್ಷ್ಯಾಧಾರವಿಲ್ಲದೆ ಕೆಲವೊಂದು ವಿಚಾರಗಳು ಪ್ರಸ್ತಾಪವಾಗಿದೆ ಎಂದರು.

ಈ ಸಂಬಂಧ ಈಗಾಗಲೇ ಸರಕಾರಕ್ಕೆ ಪತ್ರ ಬರೆದಿದ್ದು, ಅದು ಪರಿಶೀಲನಾ ಹಂತದಲ್ಲಿ ಇರುವಾಗ ಹೆಚ್ಚು ಮಾತನಾಡುವುದಿಲ್ಲ. ಅಲ್ಲದೆ ತಮ್ಮ ಬಗ್ಗೆ ಇರುವ ವೈಯಕ್ತಿಕ ಆಪಾದನೆಗಳ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ನುಡಿದರು.

ಸುರಕ್ಷತಾ ನಗರ ಯೋಜನೆಗೆ ಸಂಬಂಸಿದಂತೆ 3ನೆ ಟೆಂಡರ್ ಅನ್ನು ಕರೆಯಲಾಗಿದೆ. ಆ ಟೆಂಡರ್ ಗೆ ಬಿಡ್ ಮಾಡಲು ಜ.8ರವರೆಗೂ ಕಾಲಾವಕಾಶವಿದೆ. ನಂತರ ಜ.11ಕ್ಕೆ ಬಿಡ್‍ದಾರರ ಪೂರ್ವಾರ್ಹತೆ ಮತ್ತು ತಾಂತ್ರಿಕ ಅರ್ಹತೆಯ ಪರಿಶೀಲನೆಯಾಗುತ್ತದೆ. ಆನಂತರ ಹಣಕಾಸು ಬಿಡ್ ತೆರೆಯಲಾಗುತ್ತದೆ. ತಾಂತ್ರಿಕ ಅರ್ಹತೆ ಪಡೆಯುವ ಮತ್ತು ಕಡಿಮೆ ದರ ನಮೂದಿಸುವವರಿಗೆ ಬಿಡ್ ಆಗುತ್ತದೆ. ಇದು ಟೆಂಡರ್‍ನ ಪ್ರಕ್ರಿಯೆ ಎಂದು ಅವರು ತಿಳಿಸಿದರು.

ಈ ಟೆಂಡರ್ ನಲ್ಲಿ ಮೂರು ಹಂತದ ಸಮಿತಿಗಳಿವೆ. ಟೆಂಡರ್ ಆಹ್ವಾನಿಸುವ ಸಮಿತಿ, ಟೆಂಡರ್ ಪರಿಶೀಲನಾ ಸಮಿತಿ ಹಾಗೂ ಉನ್ನತಮಟ್ಟದ ಸಮಿತಿಯು ಇರುತ್ತದೆ. ತಾವು ಪತ್ರ ಬರೆದ ನಂತರ ಟೆಂಡರ್ ಬಗ್ಗೆ ಹಲವಾರು ಊಹಾಪೋಹಗಳು ಬಂದಿವೆ. ಮೊದಲ ಬಾರಿ ಟೆಂಡರ್ ಕರೆದಾಗ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಬಿಡ್‍ನಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಉಳಿದ ಮೂರು ಜನ ಬಿಡ್‍ದಾರರು ಪೂರ್ವ ಅರ್ಹತೆ ಮತ್ತು ತಾಂತ್ರಿಕ ಅರ್ಹತೆಗೆ ಮುಂಚೆಯೇ ಅನರ್ಹಗೊಂಡಿದ್ದಾರೆ.
ಹೀಗಾಗಿ 2ನೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿ., ಎಲ್ ಅಂಡ್ ಟಿ, ಮ್ಯಾಟ್ರಿಕ್ಸ್, ಸೆಕ್ಯೂರಿಟಿ ಮತ್ತು ಸರ್ವಲೆನ್ಸ್ ಪ್ರೈವೇಟ್ ಲಿಮಿಟೆಡ್ ಬಿಡ್‍ಗಳು ಸ್ವೀಕಾರವಾಗಿದ್ದವು. ಅದರಲ್ಲಿ ಬಿಇಎಲ್ ಅನರ್ಹಗೊಂಡಿರಲಿಲ್ಲ. ಭಾರತ ಮತ್ತು ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಚೀನಾ ಉಪಕರಣಗಳನ್ನು ಬಳಸಬಾರದೆಂದಿದೆ. ಹಾಗಾಗಿ 2ನೆ ತಂಡ ಕೂಡ ರದ್ದಾಯಿತು ಎಂದು ಅವರು ಮಾಹಿತಿ ನೀಡಿದರು.

ಇದಕ್ಕೆ ಮಾಧ್ಯಮ ಪ್ರಕಟನೆ ಮೂಲಕ ಉತ್ತರಿಸಿರುವ ಡಿ.ರೂಪಾ, ಹೇಮಂತ್ ನಿಂಬಾಳ್ಕರ್ ಅವರು ಸರಕಾರದ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೆ, ಎರಡು ಬಾರಿ ಟೆಂಡರ್ ರದ್ದತಿಗೆ ಕಾರಣವಾದ ದೂರಿಗೆ ಹಾಗೂ ಅವ್ಯವಹಾರದ ಕುರಿತು ಸುದ್ದಿಗೋಷ್ಠಿಯಲ್ಲಿ ನಿಂಬಾಳ್ಕರ್ ಸೂಕ್ತವಾಗಿ ಉತ್ತರಿಸಿಲ್ಲ. ದೊಡ್ಡ ಮೊತ್ತದ ಟೆಂಡರ್‍ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಅಕ್ರಮಗಳಿಂದ ಕೂಡಿರುವ ಟೆಂಡರ್ ಕರೆದಿದ್ದಾರೆ. ಸರಕಾರಕ್ಕೆ ಈ ಬಗ್ಗೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ ಎಂದು ಹೇಳಿದ್ದಾರೆ.

ದೂರು ಮತ್ತು ಆರೋಪಗಳನ್ನು ಪರಿಹರಿಸದೆ, ಟೆಂಡರ್ ಅಂತಿಮಗೊಳಿಸದಿರಲು ಕೇಂದ್ರ ಸರಕಾರ ಆದೇಶಿಸಿದೆ. ಅಕ್ರಮಗಳ ಬಗ್ಗೆ ಟೆಂಡರ್ ಸಮಿತಿಯಿಂದ ವರದಿ ಕೋರಿದೆ. ನಿರ್ಭಯಾ ‘ಸುರಕ್ಷ ನಗರ’ ಯೋಜನೆಯ ಪ್ರಕ್ರಿಯೆಯಲ್ಲಿ ಹೇಮಂತ್ ನಿಂಬಾಳ್ಕರ್ ವಹಿಸಿರುವ ಪಾತ್ರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ರೂಪಾ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News