×
Ad

ಆರ್‍ಟಿಇ ಮಕ್ಕಳ ಬಾಕಿ ಹಣ 550 ಕೋಟಿ ರೂ.ಬಿಡುಗಡೆ: ಸಚಿವ ಸುರೇಶ್ ಕುಮಾರ್

Update: 2020-12-27 23:06 IST

ಬೆಂಗಳೂರು, ಡಿ.27 : ಕೊರೋನ ಸಂಕಷ್ಟದ ಸಮಯದಲ್ಲಿಯೂ ಆರ್‍ಟಿಇ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ದಾಖಲಾದ ಮಕ್ಕಳಿಗೆ ಸರಕಾರದಿಂದ ನೀಡಬೇಕಾಗಿದ್ದ 550 ಕೋಟಿ ರೂ.ಗಳ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಆರ್‍ಟಿಇ ಶುಲ್ಕ ಮರುಪಾವತಿಯಾಗಿದೆ ಎನ್ನುವ ಶಿಕ್ಷಣ ಸಚಿವರ ಹೇಳಿಕೆ ಸುಳ್ಳು ಎಂಬ ಆರೋಪಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದು, ನನಗೆ ಒದಗಿಸಲಾದ ಅಂಕಿ ಅಂಶಗಳ ಆಧಾರದಲ್ಲಿ 2012-13 ರಿಂದ ಇಲ್ಲಿಯವರೆಗೆ ಸುಮಾರು 5.35 ಲಕ್ಷ ಮಕ್ಕಳಿಗೆ ಆರ್.ಟಿ.ಇ ಅಡಿಯಲ್ಲಿ ವಿವಿಧ ಖಾಸಗಿ ಅನುದಾನರಹಿತ ಶಾಲೆಗಳಿಗೆ ರಾಜ್ಯ ಸರಕಾರವು ದಾಖಲಾತಿಯನ್ನು ಒದಗಿಸಿದೆ. ಅಷ್ಟು ಸಂಖ್ಯೆಯ ಮಕ್ಕಳ ಬೋಧನಾ ಶುಲ್ಕದ ಮರುಪಾವತಿಯಾಗಿ 2372.36 ಕೋಟಿ ರೂಗಳನ್ನು ಸಂಬಂಧಿಸಿದ ಶಾಲೆಗಳಿಗೆ ಬಿಡುಗಡೆ ಮಾಡುವ ಕ್ರಮವನ್ನು ಅನುಸರಿಸಲಾಗಿದೆ ಎಂದು ಹೇಳಿದ್ದಾರೆ. 

2020-21 ನೇ ಸಾಲಿನಲ್ಲಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಮ್ಮ ಸರಕಾರ ತನ್ನ ಆಯವ್ಯಯದಲ್ಲಿ ರೂ.550 ಕೋಟಿಗಳನ್ನು ಆರ್.ಟಿ.ಇ.ಶುಲ್ಕ ಮರುಪಾವತಿಗೆ ಮೀಸಲಿಟ್ಟಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಪರಿಸ್ಥಿತಿಯನ್ನು ಅರಿತು, ಮುಖ್ಯಮಂತ್ರಿ ಯಡಿಯೂರಪ್ಪ ಖಾಸಗಿ ಶಾಲೆಗಳಿಗೆ ಸಮಸ್ಯೆಯಾಗಬಾರದು ಎಂದು ಮೊದಲ ಎರಡು ಕಂತುಗಳಲ್ಲಿ 275 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೂರನೇ ಕಂತಿನಲ್ಲಿ ರೂ.137.5 ಕೋಟಿ, ನಾಲ್ಕನೇ ಹಾಗೂ ಕೊನೆಯ ಕಂತಿನಲ್ಲಿ 137.50 ಕೋಟಿ ರೂ.ಗಳನ್ನು ಡಿಸೆಂಬರ್ 2020ರ ಒಳಗೆ ಇಡೀ ವರ್ಷದ ಅನುದಾನವಾದ 550 ಕೋಟಿ ರೂ.ಗಳನ್ನು ಸರಕಾರ ಖಾಸಗಿ ಶಾಲೆಗಳ ಆರ್.ಟಿ.ಇ.ಶುಲ್ಕ ಮರುಪಾವತಿಗೆ ಬಿಡುಗಡೆ ಮಾಡಿದೆ. ಯಾವುದೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ನಿಗದಿಯಾದ ಆರ್.ಟಿ.ಇ ಶುಲ್ಕ ಮರುಪಾವತಿ ಅನುದಾನ ಇಷ್ಟು ಶೀಘ್ರವಾಗಿ ಬಿಡುಗಡೆಗೊಂಡಿರುವುದಕ್ಕೆ ಇದು ಮೊದಲ ಬಾರಿಯ ದಾಖಲೆಯಾಗಿದೆ ಎಂದು ಹೇಳಿದ್ದಾರೆ.

ಸರಕಾರದ ಆದೇಶಗಳಿಗೆ ಅನುಗುಣವಾಗಿ ಇಲಾಖೆಯ ಆಯುಕ್ತರು ಈ ಸಾಲಿಗೆ ಆರ್.ಟಿ.ಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಅಂತಿಮ ಸುತ್ತೋಲೆಯನ್ನು ಹೊರಡಿಸಿ, ಈ ಸಾಲಿಗೆ ನಿಗದಿಯಾದ ಸಂಪೂರ್ಣ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಿದ್ದಾರೆ. 2019-20ನೇ ಸಾಲಿನ ಆರ್.ಟಿ.ಇ.ಶುಲ್ಕ ಮರುಪಾವತಿಗೆ ಈ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅನುವಾಗುವಂತೆ ಹದಿನೈದು ದಿನಗಳ ಒಳಗೆ ಶಾಲೆಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ಅನುದಾನವನ್ನು ಉಪನಿರ್ದೇಶಕರು ಬಳಸದೆ ಉಳಿಸತಕ್ಕದ್ದೆಲ್ಲವೆಂದು ಸೂಚನೆ ನೀಡಿದ್ದಾರೆ. ಸುಮಾರು ಶೇ.80 ರಷ್ಟು ಪ್ರಗತಿ ಈಗಾಗಲೇ ಆಗಿದೆ ಎಂದು ಸಚಿವರು ಹೇಳಿದ್ದಾರೆ.

ಆನ್ ಲೈನ್ ತಂತ್ರಾಂಶದ ಮೂಲಕ ಶುಲ್ಕ ಮರುಪಾವತಿಯನ್ನು ಸರಕಾರವು ಪ್ರಾರಂಭಿಸಿದ ಪ್ರಮುಖ ಉದ್ದೇಶ, ಮಧ್ಯವರ್ತಿಗಳ ಉಪಟಳವನ್ನು ತಡೆಯಬೇಕು, ಯಾವುದೇ ಶಾಲೆಯ ಆಡಳಿತ ಮಂಡಳಿಯು ವ್ಯವಸ್ಥೆಯ ಲೋಪದೋಷಗಳಿಂದ ಅನಗತ್ಯ ಶೋಷಣೆಗೆ ಒಳಗಾಗಬಾರದೆಂಬುದಾಗಿತ್ತು. ತಂತ್ರಾಂಶ ಬಳಕೆಯೆನ್ನುವುದು ಪಾರದರ್ಶಕತೆಗೆ ಒತ್ತು ಕೊಟ್ಟಿದ್ದಷ್ಟೇ ಅಲ್ಲ, ವಿದ್ಯಾರ್ಥಿಯ ದಾಖಲಾತಿಗೆ ಅನುಗುಣವಾದ ಶುಲ್ಕದ ಸರಳ ಮರುಪಾವತಿಗೆ ನಾಂದಿ ಹಾಡಿತು ಎಂದು ತಿಳಿಸಿದ್ದಾರೆ.
2016-17 ನೇ ಸಾಲಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಮಾರು 12 ಶಾಲೆಗಳು ನಿಗದಿತ ದಾಖಲೆಗಳನ್ನು ಸಲ್ಲಿಸಿಲ್ಲದ ಕಾರಣ ಆರ್.ಟಿ.ಇ ಶುಲ್ಕ ಮರುಪಾವತಿಯನ್ನು ಪಡೆದಿಲ್ಲ. 2017-18ಕ್ಕೆ ಸಂಬಂಧಿಸಿದಂತೆ 29 ಶಾಲೆಗಳು, 2018-19ನೇ ಸಾಲಿಗೆ ಸಂಬಂಧಿಸಿದಂತೆ 71 ಶಾಲೆಗಳು, 2019-20 ನೇ ಸಾಲಿಗೆ ಸಂಬಂಧಿಸಿದಂತೆ 1039 ಶಾಲೆಗಳು ವಿವಿಧ ನಿರೀಕ್ಷಿತ ದಾಖಲೆಗಳನ್ನು ಸಲ್ಲಿಸದ ಕಾರಣ ಇನ್ನೂ ಆರ್.ಟಿ.ಇ.ಶುಲ್ಕ ಮರುಪಾವತಿಯನ್ನು ಪಡೆದಿರುವುದಿಲ್ಲ. ಈ ಶಾಲೆಗಳು ಆನ್‍ಲೈನ್ ಮೂಲಕ ದಾಖಲೆಗಳು ಸಲ್ಲಿಸಿದ ಬಳಿಕವೂ ಹಣ ಪಾವತಿಯಾಗದಿದ್ದಲ್ಲಿ ನನ್ನ ಗಮನಕ್ಕೆ ತಂದೆ ಪರಿಹರಿಸಿಕೊಡುತ್ತೇನೆ ಎಂದು ಸಚಿವರು ಪ್ರಕಟನೆಯಲ್ಲಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News