×
Ad

ಎಸ್ಸಿ-ಎಸ್ಟಿ ಆಯೋಗ ನ್ಯಾಯಮಂಡಳಿ ಪಾತ್ರ ವಹಿಸಲು ಸಾಧ್ಯವಿಲ್ಲ: ಹೈಕೋರ್ಟ್

Update: 2020-12-27 23:50 IST

ಬೆಂಗಳೂರು, ಡಿ. 27: ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿಗಳ ಆಯೋಗವನ್ನು ನ್ಯಾಯಮಂಡಳಿ ಅಥವಾ ನ್ಯಾಯಾಂಗದ ಪಾತ್ರ ನಿರ್ವಹಿಸುವ ವೇದಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ.ಸಿದ್ದಲಿಂಗಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ನೌಕರರ ನಡುವೆ ಈ ವಿವಾದವಿತ್ತು. ಎಂ.ಬಿ.ಸಿದ್ದಲಿಂಗಸ್ವಾಮಿ ಅವರು ಅಧೀಕ್ಷಕರಾಗಿ 2012ರಲ್ಲಿ ಬಡ್ತಿ ಹೊಂದಿದ್ದರು. ಕೆ.ಆರ್.ಮುರಳೀದರ್ ಅವರು 2015ರಲ್ಲಿ ಬಡ್ತಿ ಹೊಂದಿದ್ದರು. 
ಕೆ.ಆರ್.ಮುರುಳೀಧರ್ ಅವರು ಎಸ್ಸಿ-ಎಸ್ಟಿ ಆಯೋಗಕ್ಕೆ ಅರ್ಜಿ ಸಲ್ಲಿಸಿ ಸಿದ್ದಲಿಂಗಸ್ವಾಮಿ ಅವರಿಗಿಂತ ಸೇವಾ ಹಿರಿತನ ಇರುವ ಕಾರಣ ಎಲ್ಲ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಕೋರಿದ್ದರು. 2012ರಿಂದ ಜಾರಿಗೆ ಬರುವಂತೆ ಸೌಲಭ್ಯಗಳನ್ನು ಒದಗಿಸಬೇಕು ಎಂದು 2016ರಲ್ಲಿ ಆಯೋಗ ಆದೇಶ ಹೊರಡಿಸಿತ್ತು. 

ಮುರುಳೀಧರ್ ಅವರು ರಾಜ್ಯ ಆಡಳಿತ ನ್ಯಾಯಮಂಡಳಿಗೆ(ಕೆಎಟಿ) ಅರ್ಜಿ ಸಲ್ಲಿಸಬೇಕಿತ್ತು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಎಸ್ಸಿ-ಎಸ್ಟಿಗಳ ಜನರ ಕುಂದುಕೊರತೆಗಳನ್ನು ಪರಿಹರಿಸುವುದು ಆಯೋಗದ ಕರ್ತವ್ಯ ಎಂದು ಆಯೋಗದ ಪರ ವಕೀಲರು ಸ್ಪಷ್ಟಪಡಿಸಿದರು. ಆಯೋಗವು ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಕಾರ್ಯಗಳನ್ನು ನಿರ್ವಹಿಸುವ ವೇದಿಕೆಯಾಗಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.     
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News