ಆಝಾದಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ

Update: 2020-12-28 11:58 GMT

ಲಕ್ನೋ :  ಅಯೋಧ್ಯೆ ಜಿಲ್ಲೆಯ ಕೆ ಎಸ್ ಸಾಕೇತ್ ಪದವಿ ಕಾಲೇಜಿನ ವಿದ್ಯಾರ್ಥಿಗಳೂ ಸೇರಿದಂತೆ ಆರು ಮಂದಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.  "ಆಝಾದಿ ಗಾಗಿ ದೇಶ ವಿರೋಧಿ ಘೋಷಣೆ'' ಕೂಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ.

ಡಿಸೆಂಬರ್ 16ರಂದು ಕಾಲೇಜು ಆವರಣದಲ್ಲಿ ಕೆಲ ವಿದ್ಯಾರ್ಥಿಗಳು `ಕೆಲ ಅಸಭ್ಯ ಮತ್ತು ದೇಶವಿರೋಧಿ ಘೋಷಣೆಗಳಾದ ಲೇ ಕೆ ರಹೇಂಗೆ ಆಝಾದಿ ' ಕೂಗಿದ್ದಾರೆಂದು ಪ್ರಾಂಶುಪಾಲ ಎನ್ ಡಿ ಪಾಂಡೆ  ತಮ್ಮ ದೂರಿನಲ್ಲಿ  ಆರೋಪಿಸಿದ್ಧಾರೆ.

"ರಾಮಜನ್ಮಭೂಮಿ ಇಲ್ಲಿಂದ ಕೇವಲ 500 ಮೀಟರ್‍ನಷ್ಟು ದೂರವಿದೆ. ಹಾಗಿರುವಾಗ ಜವಾಹರಲಾಲ್ ನೆಹರೂ ವಿವಿಯಲ್ಲಿ  ಕೂಗಿದಂತಹ ಘೋಷಣೆಗಳನ್ನು ಹಾಗೂ ಇಂತಹ ದೇಶ ವಿರೋಧಿ ಚಟುವಟಿಕೆಗಳನ್ನು ಅನುಮತಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದಾರೆ. ''ಅವರಿಗೆ ಯಾವ ರೀತಿಯ ಆಝಾದಿ ಬೇಕು. ಅವರಿಗೆ ಚುನಾವಣೆಗಳು ಬೇಕು ಆದರೆ ಈಗ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆಗಳನ್ನು ಹೇಗೆ ನಡೆಸಬಹುದು?'' ಎಂದು ಪ್ರಾಂಶುಪಾಲರು ಪ್ರಶ್ನಿಸಿದ್ದಾರೆ.

ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ  ಡಿಸೆಂಬರ್ 7ರಿಂದ ನಡೆಯುತ್ತಿರುವ ಸಂದರ್ಭ ಕೆಲ ಹೊರಗಿನವರು, ನಾಯಕರೆಂದು ಹೇಳಿಕೊಳ್ಳುವವರು ಹಾಗೂ ಸಮಾಜ ವಿರೋಧಿ ಶಕ್ತಿಗಳು ವಿದ್ಯಾರ್ಥಿ ಯೂನಿಯನ್ ಚುನಾವಣೆಗಾಗಿ ಪ್ರತಿಭಟಿಸಿವೆ ಎಂದು ಅವರು ಹೇಳಿದ್ದಾರೆ.

ಆದರೆ ಕಾಲೇಜಿನಲ್ಲಿ ವಿದ್ಯಾರ್ಥಿ ಯೂನಿಯನ್ ಚುನಾವಣೆಗಳನ್ನು ನಡೆಸದೇ ಇರುವ ಕುರಿತಂತೆ ತಾವು ಪ್ರತಿಭಟಿಸಿದ್ದಾಗಿ ಹಾಗೂ ತಮ್ಮ ಘೋಷಣೆಗಳು ಸಂಸ್ಥೆಯ ಪ್ರಾಂಶುಪಾಲರ ವಿರುದ್ಧವಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News