×
Ad

ಧರ್ಮೇಗೌಡ ಆತ್ಮಹತ್ಯೆ: ಸಿದ್ದುಗೆ ಪರೋಕ್ಷವಾಗಿ ಚುಚ್ಚಿದ ಕುಮಾರಸ್ವಾಮಿ ಹೇಳಿದ್ದೇನು?

Update: 2020-12-29 12:35 IST

ಬೆಂಗಳೂರು, ಡಿ.29: ಜೆಡಿಎಸ್‌ನ ಜಾತ್ಯತೀತತೆ ಪರೀಕ್ಷೆ ಮಾಡಿದವರಿಗೆ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡರ ಸಾವಿನ ಮೂಲಕ ಉತ್ತರ ಸಿಕ್ಕಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ಧರ್ಮೇಗೌಡರ ಆತ್ಮಹತ್ಯೆಯು ಇವತ್ತಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ. ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್‌ನ ಜಾತ್ಯತೀತತೆ ಪರೀಕ್ಷೆ ಮಾಡಲಾಯಿತು. ಆದರೆ, ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಈಗ ಉತ್ತರ ಸಿಕ್ಕಿರಬಹುದು. ಫಲಿತಾಂಶದಿಂದಲಾದರೂ ಅವರ ಆತ್ಮಾವಲೋಕನ ಆಗಲಿ” ಎಂದು ಹೇಳಿದ್ದಾರೆ.

ವಿಧಾನ ಪರಿಷತ್‌ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್‌ನ ಜಾತ್ಯತೀತ ನಿಲುವು ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಬಳಿಕ ಡಿ.15ರಂದು ವಿಧಾನ ಪರಿಷತ್ ಅಧಿವೇಶನದ ಸಂದರ್ಭ ಬಿಜೆಪಿ-ಕಾಂಗ್ರೆಸ್‌ ನಡುವೆ ಹೊಯ್‌-ಕೈ ನಡೆದಿತ್ತು. ಈ ವೇಳೆ ಸಭಾಪತಿ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಪತಿ ಧರ್ಮೇಗೌಡರನ್ನು ಎಳೆದಾಡಲಾಗಿತ್ತು.

ಇದೀಗ ಧರ್ಮೇಗೌಡ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಸಭಾಪತಿ ಸ್ಥಾನಕ್ಕಾಗಿ ನಡೆದ ಗಲಾಟೆಯ ಉಲ್ಲೇಖವಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News