ತುಮಕೂರು: ಜ.3ರಂದು 500ಕ್ಕೂ ಹೆಚ್ಚು ಜನರಿಂದ ಬೌದ್ಧ ದಮ್ಮ ಸ್ವೀಕಾರ ಸಮಾರಂಭ

Update: 2020-12-29 11:31 GMT

ತುಮಕೂರು, ಡಿ.29: ವಿಶ್ವ ಬುದ್ದ ದಮ್ಮ ಸಂಘದ ವತಿಯಿಂದ 2021ರ ಜನವರಿ 3 ರಂದು ತುಮಕೂರಿನ ಗೆದ್ದಲಹಳ್ಳಿಯ ಬುದ್ದ ವಿಹಾರ ಕೇಂದ್ರದಲ್ಲಿ ಬೌದ್ಧ ದಮ್ಮ ದೀಕ್ಷೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವಿಶ್ವ ಬೌದ್ಧ ದಮ್ಮ ಸಂಘದ ಪ್ರಧಾನ ಸಂಚಾಲಕ ಡಾ.ಎಂ.ವೆಂಕಟಸ್ವಾಮಿ ತಿಳಿಸಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ತುಮಕೂರು ಜಿಲ್ಲೆಯ 500ಕ್ಕೂ ಹೆಚ್ಚು ಜನರು ಸಮಾನತೆಯನ್ನು ಸಾರುವ, ಮನುಜ ಮತ ವಿಶ್ವ ಪಥಕ್ಕೆ ದಾರಿಯಾಗಿರುವ ಬೌದ್ಧ ದಮ್ಮವನ್ನು ಸ್ವೀಕರಿಸಲಿದ್ದಾರೆ ಎಂದರು.

ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, 1956ರ ಅಕ್ಟೋಬರ್ 14ರಂದು ತಮ್ಮ ಐದು ಲಕ್ಷಕ್ಕೂ ಹೆಚ್ಚು ಅನಯಾಯಿಗಳೊಂದಿಗೆ ಬೌದ್ಧ ದಮ್ಮವನ್ನು ಸ್ವೀಕರಿಸಿದರು. 10 ಲಕ್ಷಕ್ಕೂ ಅಧಿಕ ಜನರೊಂದಿಗೆ ಮತ್ತೊಮ್ಮೆ ಬೌದ್ಧ ದಮ್ಮ ಸ್ವೀಕರಿಸುವ ತಯಾರಿಯಲ್ಲಿದ್ದರು. ಆದರೆ ಅವರ ಆಕಾಲಿಕ ಮರಣದಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಸೆಯನ್ನು ಈಗ ವಿಶ್ವ ಬುದ್ಧ ದಮ್ಮ ಸಂಘ ಈಡೇರಿಸುವ ಸಂಕಲ್ಪ ಹೊಂದಿದ್ದು, 2021ರ ಅಕ್ಟೋಬರ್ 14 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 10 ಲಕ್ಷ ಜನರನ್ನು ಬೌದ್ಧ ದಮ್ಮಕ್ಕೆ ಸೇರಿಸುವ ಬೃಹತ್ ಕಾರ್ಯ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭೌದ್ದ ದಮ್ಮ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕೋಲಾರದಲ್ಲಿ 4000 ಜನ, ಚಿಕ್ಕಬಳ್ಳಾಪುರದಲ್ಲಿ 1000 ಜನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಜನರು ಈಗಾಗಲೇ ದಮ್ಮ ದೀಕ್ಷೆ ಪಡೆದಿದ್ದಾರೆ ಎಂದು ಡಾ.ಎಂ.ವೆಂಕಟಸ್ವಾಮಿ ವಿವರ ನೀಡಿದರು.

ಭಾರತದ ಮೂಲನಿವಾಸಿಗಳಾಗಿರುವ ದಲಿತರು, ಹಿಂದುಳಿದ ವರ್ಗಗಳು ಬೌದ್ಧ ದಮ್ಮವನ್ನು ಅನುಸರಿಸುತ್ತಿದ್ದರು. ಮತ್ತೊಮ್ಮೆ ಅದೇ ವೈಭವವನ್ನು ಬೌದ್ಧ ದಮ್ಮಕ್ಕೆ ತರುವ ಉದ್ದೇಶದಿಂದ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇಂತಹ ಕಾರ್ಯಕ್ರಮಗಳ ಮೂಲಕ ಬೌದ್ಧ ದಮ್ಮ ದೀಕ್ಷೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಡಾ.ವೆಂಕಟಸ್ವಾಮಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ದಮ್ಮ ಲೋಕ ಬುದ್ದ ವಿಹಾರದ ಸಂಚಾಲಕ ಹನುಮಂತರಾಯಪ್ಪ, ಸಿದ್ದರಾಜು, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜಣ್ಣ ಯಲದಬಾಗಿ, ರಿಪಬ್ಲಿಕ್ ಪಾರ್ಟಿ ಅಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಪಿಳ್ಳೆರಾಜು, ಯುವ ಘಟಕದ ಅಧ್ಯಕ್ಷ ಹೇಮಂತಕೃಷ್ಣ, ಮುಖಂಡರಾದ ಹೆಬ್ಬತನಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News