ಧರ್ಮೇಗೌಡ ಸಾವಿನ ಬಗ್ಗೆ ಸಮಗ್ರ ಪರಿಶೀಲನೆ: ಗೃಹ ಸಚಿವ ಬೊಮ್ಮಾಯಿ

Update: 2020-12-29 12:21 GMT

ಬೆಂಗಳೂರು, ಡಿ. 29: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಸಾವಿಗೆ ಮುನ್ನ ಬರೆದಿಟ್ಟಿರುವ ಡೆತ್‍ನೋಟ್ ಪೊಲೀಸರಿಗೆ ಸಿಕ್ಕಿದ್ದು, ಈ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆಗೂ ಮುನ್ನ ಧರ್ಮೇಗೌಡ ಅವರು ಬರೆದಿಟ್ಟಿರುವ ಡೆತ್‍ನೋಟ್ ಅನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾಗಿವೆ. ಇದನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದು ಎಂದು ಹೇಳಿದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವು ವಿಚಾರಗಳಲ್ಲಿ ಅವರ ಮನಸ್ಸಿಗೆ ನೋವಾಗಿದ್ದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಯಾವ ಕಾರಣಕ್ಕಾಗಿ ಇಂತಹ ಆತುರದ ನಿರ್ಧಾರ ಕೈಗೊಂಡಿದ್ದಾರೆಂಬುದು ತಿಳಿಯದು. ಪೊಲೀಸರು ಪರಿಶೀಲಿಸಿದ ಬಳಿಕ ಕೆಲ ವಿಚಾರಗಳು ಬಹಿರಂಗವಾಗಬಹುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ನಿನ್ನೆ ಸಂಜೆ ರೈಲ್ವೆ ನಿಲ್ದಾಣದಲ್ಲಿ ತಮಗೆ ಬೇಕಾದವರೊಬ್ಬರು ಆಗಮಿಸುತ್ತಿದ್ದು, ಅವರನ್ನು ರಿಸೀವ್ ಮಾಡಬೇಕೆಂದು ಹೇಳಿ ಹೋಗಿದ್ದರು. ಆದರೆ, ಎಷ್ಟು ಹೊತ್ತು ಕಳೆದರೂ ಹಿಂದಿರುಗಿ ಬಾರದೆ ಇದ್ದಾಗ ಅವರ ಕಾರು ಚಾಲಕ ಹೋಗಿ ನೋಡಿದ್ದಾನೆ. ಕೊನೆಗೆ ಸಂಜೆ 6.30ರವರೆಗೆ ಬಾರದಿದ್ದಾಗ 8 ಗಂಟೆ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅವರ ಕೊನೆಯ ಮೊಬೈಲ್ ಫೋನ್ ಕರೆ ಆಧಾರದಲ್ಲಿ ಪೊಲೀಸರು ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಅವರು ವಿವರಿಸಿದರು.

ಎಸ್.ಎಲ್.ಧರ್ಮೇಗೌಡ ಅವರು ಸಜ್ಜನ ರಾಜಕಾರಣಿಯಾಗಿದ್ದರು. ಉಪಸಭಾಪತಿಯಾಗಿ ವಿಧಾನಪರಿಷತ್‍ಗೆ ಘನತೆ ಗೌರವ ತಂದುಕೊಟ್ಟಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಂತಹ ಆತುರದ ನಿರ್ಧಾರ ಕೈಗೊಂಡಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಆದರೆ, ನಡೆದುಹೋಗಿದೆ. ಅತ್ಯಂತ ನೋವು ತಂದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News