×
Ad

ಬಲವಂತದಿಂದ ಸಭಾಪತಿ ಪೀಠದಲ್ಲಿ ಕೂರಿಸಿದ್ದು ಧರ್ಮೇಗೌಡರಿಗೆ ಇಷ್ಟವಿರಲಿಲ್ಲ: ಸಿದ್ದರಾಮಯ್ಯ

Update: 2020-12-29 17:56 IST

ಬೆಂಗಳೂರು, ಡಿ.29: ರಾಜ್ಯ ಸರಕಾರವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅಗತ್ಯವಿರಲಿಲ್ಲ. ಈ ಕಾಯ್ದೆ ಬಗ್ಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಚರ್ಚೆಯಾಗಿಲ್ಲ. ಇಷ್ಟೊಂದು ಆತುರವಾಗಿ ಈ ಕಾಯ್ದೆಯನ್ನು ತರುವ ತುರ್ತು ಅಗತ್ಯವಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 42 ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿವೆ. ರಾಜ್ಯ ಸರಕಾರ ಆತುರವಾಗಿ ಈ ಕಾಯ್ದೆ ಜಾರಿ ಮಾಡುವುದರಿಂದ ಇವರೆಲ್ಲರೂ ತೊಂದರೆಗೆ ಸಿಲುಕಲಿದ್ದಾರೆ. ಅಷ್ಟೇ, ಅಲ್ಲದೇ ಕೃಷಿ ಕ್ಷೇತ್ರ ಹಾಗೂ ಚರ್ಮೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಲಿದೆ. ನಾವು ಹಾಕೋ ಚಪ್ಪಲಿಗಳು, ಹೆಣ್ಣುಮಕ್ಕಳು ಬಳಸುವ ವ್ಯಾನಿಟಿ ಬ್ಯಾಗ್‍ಗಳನ್ನು ಚರ್ಮದಿಂದ ತಯಾರಿಸಲಾಗುತ್ತದೆ. ಸರಕಾರದ ಈ ನಿರ್ಧಾರದಿಂದ ಲಿಡ್ಕರ್ ಅನ್ನು ಮುಚ್ಚಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ರೂಪಾಂತರಗೊಂಡಿರುವ ಕೊರೋನ ವೈರಾಣು ಪತ್ತೆಯಾಗಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಜನರಲ್ಲಿ ಇರುವ ಆತಂಕ ದೂರ ಮಾಡಬೇಕು. ಬ್ರಿಟನ್‍ನಿಂದ ಬಂದಿರುವವರನ್ನು ಹುಡುಕುವುದಲ್ಲ. ಅವರನ್ನು ವಿಮಾನ ನಿಲ್ದಾಣದಲ್ಲೆ ಪರೀಕ್ಷೆ ಮಾಡಿ, ಕ್ವಾರಂಟೈನ್ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್ತಿನ ಉಪಸಭಾಪತಿ ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು. ಅವರ ತಂದೆಯವರ ಕಾಲದಿಂದಲೂ ಕುಟುಂಬದ ಪರಿಚಯ ಇತ್ತು. ತಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಧರ್ಮೇಗೌಡರ ತಂದೆ ಎಸ್.ಆರ್.ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತರಾಗಿದ್ದರು. ರೈತಪರ, ಜನಪರ ಕಾಳಜಿಯುಳ್ಳ ವ್ಯಕ್ತಿ ಅಗಲಿರೋದು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದುರುದ್ದೇಶಪೂರ್ವಕವಾಗಿ ನೀಡುವ, ಸುಳ್ಳು ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಬಿಜೆಪಿ ಮತ್ತು ಜೆಡಿಎಸ್‍ನವರು ಅಂದು ವಿಧಾನಪರಿಷತ್ತಿನಲ್ಲಿ ಬಲವಂತದಿಂದ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿದರು. ಅದು ಅವರಿಗೆ ಇಷ್ಟವಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News