ಕರ್ತವ್ಯದ ವೇಳೆ ಹೃದಯಾಘಾತವಾದರೆ ಅಪಘಾತವೆಂದು ಪರಿಗಣಿಸಿ: ಹೈಕೋರ್ಟ್
ಬೆಂಗಳೂರು, ಡಿ.29: ಕರ್ತವ್ಯದಲ್ಲಿ ಇದ್ದಾಗ ನೌಕರನಿಗೆ ಉಂಟಾದ ಹೃದಯಾಘಾತವನ್ನು ಅಪಘಾತ ಎಂದು ಪರಿಗಣಿಸಲು ಬರುವುದಿಲ್ಲ ಎಂಬ ಸರಕಾರಿ ಸ್ವಾಮ್ಯದ ಈಶಾನ್ಯ ರಸ್ತೆ ಸಾರಿಗೆ ನಿಗಮದ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ನೌಕರ ಹೃದಯಾಘಾತದಿಂದ ಸಾವನ್ನಪ್ಪಿದರೆ ಅದನ್ನು ಅಪಘಾತವೆಂದೇ ಪರಿಗಣಿಸಬೇಕು ಎಂದು ತೀರ್ಪು ನೀಡಿದೆ. ಹಾಗೆಯೇ ಮೃತನ ಕುಟುಂಬಕ್ಕೆ ಪರಿಹಾರ ನೀಡಲು ನಿರ್ದೇಶಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್‍ದತ್ ಯಾದವ್ ಮತ್ತು ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರಿದ್ದ ವಿಭಾಗೀಯ ಪೀಠ, ಅಪಘಾತವನ್ನು ನಿರೀಕ್ಷೆ ಮಾಡಲು ಅಥವಾ ಯೋಚಿಸಲು ಸಾಧ್ಯವಿಲ್ಲ. ಹೀಗಾಗಿ, ಕರ್ತವ್ಯದ ಮೇಲಿದ್ದಾಗ ನೌಕರನಿಗೆ ಹೃದಯಾಘಾತ ಉಂಟಾದರೆ, ಅದನ್ನು ಅಪಘಾತವೆಂದೇ ಪರಿಗಣಿಸಬೇಕಾಗುತ್ತದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣವೇನು: ಎನ್‍ಇಕೆಆರ್‍ಟಿಸಿಯಲ್ಲಿ ಬಸ್ ಚಾಲಕರಾಗಿದ್ದ ವಿಜಯ್ ಕುಮಾರ್ ಗೆ, 2012ರ ಸೆ.5ರ ಸಂಜೆ 4:45 ಸಮಯದಲ್ಲಿ ಕಲಬುರಗಿ ಯೂನಿರ್ವಸಿಟಿ ಆವರಣದ ಬಳಿ ಬಸ್ ಚಾಲನೆ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ವಿಜಯ್ ಕುಮಾರ್ ಸಾವನ್ನಪ್ಪಿದ್ದರು.
ಇದರಿಂದ ಅವರ ಪತ್ನಿ ಮತ್ತು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಕರ್ತವ್ಯದ ಮೇಲಿದ್ದಾಗ ಒತ್ತಡ ಮತ್ತು ಆಯಾಸ ಉಂಟಾದ ಪರಿಣಾಮ ವಿಜಯ್ ಕುಮಾರ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ್ದ ಕಲಬುರಗಿಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಮೃತ ನೌಕರನ ಕುಟುಂಬದವರಿಗೆ ಪರಿಹಾರ ವಿತರಣೆ ಮಾಡುವ ದಿನದವರೆಗೂ ಅನ್ವಯವಾಗುವಂತೆ ವಾರ್ಷಿಕ ಶೇ.12ರಷ್ಟು ಬಡ್ಡಿ ದರದಲ್ಲಿ ಒಟ್ಟು 21,95,090 ರೂ. ಪರಿಹಾರ ನೀಡುವಂತೆ ಎನ್‍ಇಕೆಆರ್‍ಟಿಸಿಗೆ 2017ರ ಎ.5ರಂದು ಆದೇಶಿಸಿತ್ತು.
ಈ ಆದೇಶ ರದ್ದು ಕೋರಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಎನ್‍ಇಕೆಆರ್‍ಟಿಸಿ, ನೌಕರರ ಪರಿಹಾರ ಕಾಯ್ದೆ-1923ರ ಸೆಕ್ಷನ್ 3ರ ಪ್ರಕಾರ ಹೃದಯಾಘಾತವು ಅಪಘಾತ ಅಥವಾ ವೈಯಕ್ತಿಕ ಗಾಯದ ವ್ಯಾಪ್ತಿಗೆ ಬರುವುದಿಲ್ಲ. ಪರಿಹಾರ ಕಲ್ಪಿಸಬೇಕಾದರೆ ಚಾಲಕ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅಥವಾ ವೈಯಕ್ತಿಕವಾಗಿ ಗಾಯಗೊಂಡು ಸಾವನ್ನಪ್ಪಿರಬೇಕು. ವಿಜಯ್ ಕುಮಾರ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ವಿಜಯ್ ಕುಮಾರ್ ಅವರದ್ದು ಸಹಜ ಸಾವು. ಅವರ ಸಾವಿಗೂ ಮತ್ತು ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಪರಿಹಾರ ಕಲ್ಪಿಸಲಾಗದು ಎಂದು ಸಮರ್ಥಿಸಿಕೊಂಡಿತ್ತು.
ಎನ್‍ಇಕೆಆರ್‍ಟಿಸಿ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಹೃದಯಾಘಾತವೇ ಒಂದು ಅಪಘಾತ. ಜನ ಹಾಗೂ ವಾಹನ ಸಂಚಾರ ಹೆಚ್ಚಿರುವಂತಹ ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಬಸ್ ಚಲಾಯಿಸಿದ್ದಾರೆ. ಇದರಿಂದ ಸಹಜವಾಗಿಯೇ ಆಯಾಸ ಮತ್ತು ಒತ್ತಡ ಏರ್ಪಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ವಾಹನ ಚಾಲನೆ ಕೆಲಸದ ಸ್ವರೂಪವೇ ಒತ್ತಡದಿಂದ ಕೂಡಿರುತ್ತದೆ. ವಿಜಯ್ ಕುಮಾರ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವುದನ್ನು ವೈದ್ಯಕೀಯ ದಾಖಲೆಗಳು, ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿರುವುದನ್ನು ಇತರೆ ದಾಖಲೆಗಳು ಸಾಬೀತುಪಡಿಸುತ್ತದೆ. ಹೀಗಾಗಿ, ಪರಿಹಾರ ಕಲ್ಪಿಸಲು ಕೆಳ ನ್ಯಾಯಾಲಯ ಹೊರಡಿಸಿರುವ ಆದೇಶವು ಸೂಕ್ತವಾಗಿದೆ ಎಂದು ಆದೇಶಿಸಿದ ಪೀಠ ಸಾರಿಗೆ ಸಂಸ್ಥೆಯ ಮೇಲ್ಮನವಿ ವಜಾಗೊಳಿಸಿದೆ.