ಬ್ರಿಟನ್‍ನಿಂದ ಬಂದವರು ಸ್ವಯಂಪ್ರೇರಿತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಚಿವ ಸುಧಾಕರ್ ಮನವಿ

Update: 2020-12-29 14:14 GMT

ಬೆಂಗಳೂರು, ಡಿ.29: ಬ್ರಿಟನ್‍ನಿಂದ ರಾಜ್ಯಕ್ಕೆ ಬಂದು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವವರು ತಮ್ಮ ಹಾಗೂ ತಮ್ಮ ಸಂಪರ್ಕದಲ್ಲಿ ಬಂದಿರುವವರ ಆರೋಗ್ಯದ ದೃಷ್ಟಿಯಿಂದ ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ತೆರಳಿ ತಮ್ಮ ಮಾಹಿತಿಯನ್ನು ನೀಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‍ನಿಂದ ಬಂದಿರುವ 1614 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ 26 ಮಂದಿಗೆ ಆರ್‍ಟಿಪಿಸಿಆರ್ ನಲ್ಲಿ ಪಾಸಿಟಿವ್ ಬಂದಿದೆ. ಅವರಲ್ಲಿ ತಾಯಿ, ಮಗು ಸೇರಿದಂತೆ ಮೂವರಿಗೆ ರೂಪಾಂತರಗೊಂಡಿರುವ ಕೋವಿಡ್ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದರು.

ನಿಮ್ಹಾನ್ಸ್ ನಲ್ಲಿ ಈ ಮೂವರಿಗೆ ಪರೀಕ್ಷೆ ಮಾಡಲಾಗಿತ್ತು. ಇವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. 26 ಜನರನ್ನು ಪ್ರತ್ಯೇಕವಾಗಿರಿಸಿ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದೇವೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಭೇಟಿ ಮಾಡಿ ಅವರಿಗೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದೇವೆ ಎಂದು ಸುಧಾಕರ್ ಹೇಳಿದರು.

ಕೇವಲ ಪಾಸಿಟಿವ್ ಬಂದಿರುವವರನ್ನು ಅಷ್ಟೇ ಅಲ್ಲದೆ, ವಿಮಾನಗಳಲ್ಲಿ ಇವರೊಂದಿಗೆ ಬಂದಿರುವ ಸಹ ಪ್ರಯಾಣಿಕರ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳ ಮೂಲಕ ಕಲೆ ಹಾಕಿ, ಅವರ ಆಗು ಹೋಗುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಪರೀಕ್ಷೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಬ್ರಿಟನ್‍ನಿಂದ ಬಂದು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವವರನ್ನು 48 ಗಂಟೆಗಳಲ್ಲಿ ಪತ್ತೆ ಮಾಡಿ ಆರೋಗ್ಯ ಇಲಾಖೆಯ ಸುಪರ್ದಿಗೆ ವಹಿಸುವುದಾಗಿ ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪರಿಸ್ಥಿತಿಯ ಸಂದಿಗ್ಧತೆಯನ್ನು ನಾಪತ್ತೆಯಾಗಿರುವವರು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಆರೋಗ್ಯದ ದೃಷ್ಟಿಯಿಂದ ನಾವು ಶ್ರಮ ಪಡುತ್ತಿದ್ದೇವೆ. ಅದಕ್ಕೆ ಸಹಕರಿಸದೆ ಹೋದರೆ, ಅದು ಕಾನೂನಿಗೆ ವಿರುದ್ಧವಾಗುತ್ತದೆ. ಆಗ ಅನಿವಾರ್ಯವಾಗಿ ಗೃಹ ಇಲಾಖೆಯು ಬಿಗಿಯಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಧಾಕರ್ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ಜನವರಿ 1ರಿಂದ ಶಾಲಾ, ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. 6 ರಿಂದ 9ನೆ ತರಗತಿಯವರೆಗೆ ವಿದ್ಯಾಗಮ ಸೇರಿದಂತೆ ಎಲ್ಲವೂ ಪೂರ್ವ ನಿಗದಿಯಂತೆ ಆರಂಭವಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಬೇಡ. ಜನವರಿಯಿಂದ ಲಸಿಕೆ ಬರುವುದು ಆರಂಭವಾಗಬಹುದು. ಶಾಶ್ವತವಾಗಿ ಈ ಕಾಯಿಲೆಯಿಂದ ನಾವು ದೂರ ಇರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಲಾಕ್‍ಡೌನ್-ಸೀಲ್ ಡೌನ್ ಅಗತ್ಯವಿಲ್ಲ

ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿಯಂತೆ ರೂಪಾಂತರಗೊಂಡಿರುವ ಕೋವಿಡ್ ವೈರಾಣು ಸೋಂಕು ತಗುಲಿರುವವರಿಗೆ 14 ದಿನಗಳ ಬದಲು 28 ದಿನಗಳ ಕಾಲ ಐಸೋಲೇಷನ್‍ನಲ್ಲಿ ಇಡಲಾಗುತ್ತದೆ. ತಜ್ಞರ ಅಭಿಪ್ರಾಯದಂತೆ ನಮ್ಮ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಪಾಸಿಟಿವ್ ಬಂದಿರುವ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲಾಕ್‍ಡೌನ್ ಅಥವಾ ಸೀಲ್ ಡೌನ್ ಮಾಡುವ ಅಗತ್ಯ ಕಂಡು ಬರುತ್ತಿಲ್ಲ.

-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News