×
Ad

ಅಪರಾಧ ನಡೆದ ಸ್ಥಳದಲ್ಲಿದ್ದವರನ್ನೆಲ್ಲಾ ಅಪರಾಧಿಗಳೆಂದು ಪರಿಗಣಿಸುವುದು ಸರಿಯಲ್ಲ: ಹೈಕೋರ್ಟ್

Update: 2020-12-29 21:10 IST

ಬೆಂಗಳೂರು, ಡಿ.29: ಅಪರಾಧ ನಡೆದ ಸ್ಥಳದಲ್ಲಿ ಇದ್ದವರನ್ನೆಲ್ಲಾ ಅಪರಾಧಿಗಳು ಎಂದು ಪರಿಗಣಿಸುವುದು ಸರಿಯಲ್ಲ. ಐಪಿಸಿ ಸೆಕ್ಷನ್ 149 ಅಡಿ ಅಕ್ರಮ ಕೂಟದ ಸದಸ್ಯರೆಂದು ಪರಿಗಣಿಸುವ ಮುನ್ನ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್ ತನಿಖಾಧಿಕಾರಿಗಳಿಗೆ ಸೂಚಿಸಿದೆ.

ಮಂಗಳೂರಿನ ಕುಮಾರ್ ಎಂಬಾತನ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ನ್ಯಾ.ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ 'ಅಪರಾಧ ನಡೆದ ಜಾಗದಲ್ಲಿದ್ದ ಎಲ್ಲರೂ ಅಕ್ರಮ ಕೂಟದ ಸದಸ್ಯರು ಎಂದು ಪರಿಗಣಿಸಬಾರದು. ಐಪಿಸಿ ಸೆಕ್ಷನ್ 149 ರ ಪ್ರಕಾರ ಅಕ್ರಮ ಕೂಟದ ಸದಸ್ಯರು ಎಂದು ಪರಿಗಣಿಸಬೇಕಾದರೆ, ಅವರು ಕೃತ್ಯದಲ್ಲಿ ಭಾಗಿಯಾಗಿರಬೇಕು ಅಥವಾ ಕೃತ್ಯ ಎಸಗಲು ಮುಂದಾಗಿರಬೇಕು. ಆದರೆ, ತನಿಖಾ ಸಂಸ್ಥೆಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 149ನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಈ ನಿಯಮವನ್ನು ಅನ್ವಯಿಸುವ ಮುನ್ನ ತನಿಖಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಗಲಭೆ ಅಥವಾ ದೊಂಬಿ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ವೀಕ್ಷಿಸುತ್ತಿರುವ ಅಮಾಯಕರನ್ನೂ ಕೆಲವೊಂದು ಪ್ರಕರಣಗಳಲ್ಲಿ ಸೇರಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಕೆಲ ರಾಜಕಾರಣಿಗಳು ಹಾಗೂ ಸ್ವಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಸೆಕ್ಷನ್ 149 ನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಅಮಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ತನಿಖಾಧಿಕಾರಿಗಳು ಸೂಕ್ತ ಪರಾಮರ್ಶೆ ನಡೆಸಿ ಆ ನಿಯಮವನ್ನು ಅನ್ವಯಿಸಬೇಕು. ಹಾಗೆಯೇ ವಿಚಾರಣಾ ನ್ಯಾಯಾಲಯಗಳು ಅಕ್ರಮ ಕೂಟ ವಿಚಾರದಲ್ಲಿ ಸರಿಯಾದ ಸಾಕ್ಷಿಗಳ ಆಧಾರದಲ್ಲಿ ವಿಮರ್ಶಿಸಿ ನಿಲುವು ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ: 2012ರ ಜೂನ್ 15ರ ರಾತ್ರಿ 11 ಗಂಟೆ ಸುಮಾರಿಗೆ ಮಂಗಳೂರಿನ ಪ್ರದೀಪ್, ಮಂಜುನಾಥ್, ಸಂತೋಷ್ ಹಾಗೂ ಕುಮಾರ್ ಎಂಬವರ ತಂಡದ ಮೇಲೆ ಸಂತೋಷ್ ಪೂಜಾರಿ, ಗೌರೀಶ್, ಹರ್ಷರಾಜ್, ಗೌತಮ್ ಹಾಗೂ ಅಕ್ಷಯ್ ಎಂಬವರ ತಂಡ ದಾಳಿ ಮಾಡಿತ್ತು. ಈ ವೇಳೆ ಸಂತೋಷ್ ಪೂಜಾರಿ ಚಾಕು ಇರಿದಿದ್ದರಿಂದ ಕುಮಾರ್ ಸಾವನ್ನಪ್ಪಿದ್ದ. ಈ ಸಂಬಂಧ ದಾಖಲಿಸಿದ್ದ ಪ್ರಕರಣದಲ್ಲಿ ಅಕ್ರಮ ಕೂಟ, ಗಲಭೆ, ಹಲ್ಲೆ, ಪ್ರಚೋದನೆ ಮತ್ತು ಕೊಲೆ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ಆದೇಶ ಪ್ರಶ್ನಿಸಿ ಐವರು ಆರೋಪಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಇದು ಪೂರ್ವ ನಿಯೋಜಿತ ಕೃತ್ಯವಲ್ಲ. ಹಾಗಿದ್ದೂ ಸಂತೋಷ್ ಪೂಜಾರಿ ಚಾಕುವಿನಿಂದ ಇರಿದ ಪರಿಣಾಮ ಕುಮಾರ್ ಸಾವನ್ನಪ್ಪಿದ್ದಾನೆ. ಇದು ದಿಢೀರ್ ನಡೆದಿರುವ ಅಪರಾಧ ಕೃತ್ಯ ಎಂದು ಅಭಿಪ್ರಾಯಪಟ್ಟು, ಮೊದಲ ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 9 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿದೆ. ಹಾಗೆಯೇ, ಘಟನೆ ನಡೆದ ಸಂದರ್ಭದಲ್ಲಿ ಉಳಿದ ನಾಲ್ವರು ಜತೆಗಿದ್ದರೇ ಹೊರತು ಕೊಲೆ ಮಾಡಿಲ್ಲ ಅಥವಾ ಕೊಲೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಸ್ಥಳದಲ್ಲಿದ್ದ ಮಾತ್ರಕ್ಕೇ ಅವರನ್ನು ಅಕ್ರಮ ಕೂಟದ ಸದಸ್ಯರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ನಾಲ್ವರನ್ನು ಖುಲಾಸೆಗೊಳಿಸಿ, ಗಲಭೆ, ಹಲ್ಲೆ ಆರೋಪಗಳ ಅಡಿ ತಲಾ 13,500 ರೂಪಾಯಿ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News